ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಆರೋಪದ ಮೇರೆಗೆ ವಿಜಯಪುರ ನಗರದ ಗಣೇಶನಗರ ನಿವಾಸಿ, ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದ ತುಳಸಿರಾಮ್ ತಂದೆ ಪಂಡಿತ ಹರಿಜನ @ ಬನಸೋಡೆ (27) ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಆನಂದ್ ಕೆ. ಅವರು ಕರ್ನಾಟಕ ಅಕ್ರಮ ಕಳ್ಳಭಟ್ಟಿ ಸರಾಯಿ ವ್ಯವಹಾರ, ಮಾದಕ ದ್ರವ್ಯ ಅಪರಾಧಿಗಳು, ಜೂಜುಕೋರರು, ಗುಂಡಾಗಳು, ಅನೈತಿಕ ಮಾನವ ಕಳ್ಳಸಾಗಣೆ ಹಾಗೂ ಇತರೆ ಅಪಾಯಕಾರಿ ಚಟುವಟಿಕೆಗಳ ತಡೆ ಅಧಿನಿಯಮ–1985 (ಗೂಂಡಾ ಕಾಯ್ದೆ)ರ ಕಲಂ 3(1) ಮತ್ತು 3(2) ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ತುಳಸಿರಾಮ್ ಬನಸೋಡೆ ವೃತ್ತಿಪರ ಅಪರಾಧಿಯಾಗಿದ್ದು, ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಅಧ್ಯಾಯಗಳಿಗೆ ಸಂಬಂಧಿಸಿದ ಅಪರಾಧಗಳಲ್ಲಿ ತೊಡಗಿರುವ ಪ್ರವೃತ್ತಿ ಹೊಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಸಮಾಜದ ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಅವನನ್ನು ತಡೆಬಂಧನದಲ್ಲಿ ಇರಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ತುಳಸಿರಾಮ್ ಬನಸೋಡೆ ಅವರನ್ನು ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ತಡೆಬಂಧನದಲ್ಲಿ ಇರಿಸಲು ಆದೇಶಿಸಲಾಗಿದ್ದು, ಬಂಧನಕ್ಕೆ ಸಂಬಂಧಿಸಿದ ಮೂಲ ಆಧಾರಗಳು ಹಾಗೂ ಕಾರಣಗಳನ್ನು ಆದೇಶದೊಂದಿಗೆ ಲಗತ್ತಿಸಲಾಗಿದೆ.
ಈ ಆದೇಶವನ್ನು ಜುಲೈ 10, 2026ರಂದು ಹೊರಡಿಸಲಾಗಿದ್ದು, ಜಾರಿಗೆ ತರಲು ಗೋಳಗುಮ್ಮಟ ಪೊಲೀಸ್ ವೃತ್ತ ನಿರೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಬಂಧನದ ಆದೇಶವನ್ನು ಜಾರಿಗೊಳಿಸಿದ ದಿನಾಂಕ ಹಾಗೂ ಸಮಯದ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

