ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೊಲ್ಹಾರ ತಾಲೂಕಿನಲ್ಲಿ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಹಾಗೂ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಮುಳವಾಡ ಏತ ನೀರಾವರಿ ಯೋಜನೆಯ 1ನೇ, 2ನೇ ಹಾಗೂ 3ನೇ ಹಂತದ ಕಾಲುವೆಗಳಿಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ನೀರಿನ ಒಳಹರಿವು ಇರುವುದರಿಂದ ರೈತರ ಹಿತದೃಷ್ಟಿಯಿಂದ ನೀರು ಬಿಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಮಳೆಯ ಕೊರತೆಯಿಂದ ಕೊಲ್ಹಾರ ಸೇರಿದಂತೆ ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆದಿರುವ ಗೋವಿನ ಜೋಳ, ತೊಗರಿ, ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಇದರಿಂದ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುವ ಆತಂಕ ವ್ಯಕ್ತವಾಗಿದೆ.
ಇದೇ ವೇಳೆ ರೈತರು ರಸಗೊಬ್ಬರ ಸಮಸ್ಯೆಯನ್ನೂ ಎತ್ತಿಹಿಡಿದರು. ಯುರಿಯಾ ಗೊಬ್ಬರವನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ, ರಶೀದಿ ನೀಡದೇ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು. ಜೊತೆಗೆ ಡಿಎಪಿ (18:46) ಗೊಬ್ಬರ ಲಭ್ಯವಿಲ್ಲದೆ ಕಳಪೆ ಗೊಬ್ಬರವನ್ನು ಹೆಚ್ಚು ಬೆಲೆಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರವಿಕಾಂತ ಪಾಟೀಲ, ಕಲ್ಲಪ್ಪ ಗಿಡ್ಡಪ್ಪಗೋಳ, ಎಸ್.ಎಸ್. ಕುಲೊಳ್ಳಿ, ವೀರುಪಾಕ್ಷಿ ಕೋಲಕಾರ, ಸುನೀಲಕುಮಾರ ಹಿರೇಮಠ, ರಮೇಶ ಬೀಳಗಿ, ಬಸಯ್ಯ ಕಂಬಿ, ಪರಮಪ್ಪ ಬರಗಿ, ಗುರುಲಿಂಗಪ್ಪ ಬಾಟಿ, ಸಂಗು ಬಿರಾದಾರ, ರಾವತ್ ಬೀಳಗಿ, ಶ್ರೀಕಾಂತ ಪಾರಗೊಂಡ, ಮುತ್ತಪ್ಪ ಅಂತರಗೊಂಡ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

