ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅನಧೀಕೃತ ಶಾಲೆಗಳ ಕಡಿವಾಣಕ್ಕೆ ಸಂಘಟನೆಯ ವತಿಯಿಂದ ನಡೆದ ಹೋರಾಟದ ಹಿನ್ನೆಲೆ ಪಟ್ಟಣದ ವಿದ್ಯಾನಗರದ ವಿದ್ಯಾಸ್ಪೂರ್ತಿ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಅನುಮತಿ ರದ್ದು ಪಡಿಸಿದ ಆದೇಶ ಸ್ವಾಗತಾರ್ಹ. ಶಿಕ್ಷಣ ಇಲಾಖೆಯ ದಿಟ್ಟ ಅಧಿಕಾರಿಗಳಿಗೆ ಮತ್ತು ಹೋರಾಟಕ್ಕೆ ಬೆಂಬಲಿಸಿದ ಬಡಾವಣೆಯ ನಿವಾಸಿಗಳಿಗೆ ನಮ್ಮ ಸಂಘಟನೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿಯ ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಈ ಕಾರ್ಯ ಸಂತಸ ತಂದಿದ್ದರೂ ದೂರು ನೀಡಿದ ತಕ್ಷಣವೇ ಈ ಕಾರ್ಯವಾಗಿಲ್ಲವಲ್ಲ ಎಂಬ ನೋವು ಇದೆ. ದಾಖಲೆಗಳು ಖೊಟ್ಟಿ ಇವೆ ಅಂತಾ ತಿಳಿದರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹೋರಾಟದ ಬಗ್ಗೆ ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದರು. ನಾವು ಹೋರಾಟ ಮಾಡುವವರು ಹೊರತು ಮಾರಾಟವಾಗುವವರಲ್ಲ. ಅಂಬೇಡ್ಕರ್ ಸಾಹೇಬರ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡುತ್ತೇವೆ ಹೊರತು ಕಂಡವರ ದುಡ್ಡಿಗೆ ಎಂದಿಗೂ ಆಸೆ ಪಡುವವರಲ್ಲ ಎಂದರು.
ಸAಘಟನೆಯ ತಾಲೂಕು ಅಧ್ಯಕ್ಷ ರಮೇಶ ದೊಡಮನಿ, ರಾಜ್ಯ ಹೋರಾಟಗಾರ ದುರ್ಗಪ್ಪ ದೊಡಮನಿ, ಡಿಎಸ್‌ಎಸ್ ನ ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ತಾಳಿಕೋಟೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಮಾಡಬೇಕಾದ ಕಾರ್ಯಕ್ಕೆ ಹೋರಾಟ ಮಾಡಬೇಕಾಯಿತು. ಇಂತಹ ಅಕ್ರಮ ಶಾಲೆಗಳು ಮತಕ್ಷೇತ್ರದಲ್ಲಿ ಸಾಕಷ್ಟಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗದೇ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಶೀಘ್ರ ಕ್ರಮಕ್ಕೆ ಮುಂದಾಗಬೇಕು. ನಿರ್ಲಕ್ಷ ತೋರಿದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ವೇಳೆ ಸಂಘಟನೆಯ ಪದಾಧಿಕಾರಿಗಳಾದ ಪರಶುರಾಮ ಕವಡಿಮಟ್ಟಿ, ರಮೇಶ ಹಡಗಿನಾಳ, ಆನಂದ ಚಲಮಿ, ಸಂಗಮೇಶ ಢವಳಗಿ, ಪರಶುರಾಮ ಚಲವಾದಿ ಇದ್ದರು.

