Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 21, 2026

ವಿಶ್ವದಾದ್ಯಂತ ಹರಡಿಕೊಂಡಿರುವ ಬಂಜಾರರು :ಪ್ರೊ.ನಾರಾಯಣ

ಕೋರಿಕೆಗೆ ಮನ್ನಣೆ: ರೈಲ್ವೆ ಸಚಿವರಿಗೆ ಸಚಿವ ಎಂ.ಬಿ.ಪಾಟೀಲ ಧನ್ಯವಾದ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ಪುಣ್ಯವಂತರ ನೆಲೆಬೀಡು ಮೈಸೂರು
ಭಾವರಶ್ಮಿ

ಪುಣ್ಯವಂತರ ನೆಲೆಬೀಡು ಮೈಸೂರು

By No Comments9 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ರಶ್ಮಿ ಕೆ. ವಿಶ್ವನಾಥ್,
ಮೈಸೂರು

ಉದಯರಶ್ಮಿ ದಿನಪತ್ರಿಕೆ

ಇದು, ಮೈಸೂರಿಗೆ ʼವಿಶ್ವವಿಖ್ಯಾತ ಮೈಸೂರುʼ ಎಂಬ ಹೆಸರು ತಂದುಕೊಟ್ಟ ಸಾಂಸ್ಕೃತಿಕ ನಗರಿ ಮೈಸೂರಿನ ರಾಯಭಾರಿಗಳಾದಂತಹ ಅಂಬಾವಿಲಾಸ ಅರಮನೆಯ ಮೈಸೂರು ಒಡೆಯರ ಸ್ವಾರಸ್ಯಕರ ಕಥೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವ ಪರಿ.
ʼಜಗತ್ಪ್ರಸಿದ್ಧ ಮೈಸೂರು’
ಮೈಸೂರಿನ ವಿಷಯ ಬಂದಾಗ ಕೆಲವು ವಿಶೇ಼ಷಣಗಳೂ ಸಹ ಅದರೊಂದಿಗೆ ಸೇರಿಕೊಳ್ಳುತ್ತವೆ. ಅದು ಹೇಗೆ ಮೈಸೂರು ಜಗತ್ತಿನಾದ್ಯಾಂತ ಇಷ್ಟೊಂದು ಪ್ರಸಿದ್ಧಿ ಪಡೆಯಿತು. ಇದಕ್ಕೆ ಕಾರಣರಾದವರು ಯಾರು? ಕಾರಣವಾದ ಅಂಶಗಳಾವುವು? ಈ ಕುತೂಹಲ ಮೂಡಲೇಬೇಕಲ್ಲ? ಸಾಕ್ಷಿ ಕಣ್ಣ ಮುಂದೆಯೇ ಇದೆ. ಅದೇ 415 ವರ್ಷಗಳ ಹಿಂದಿನಿಂದಲೂ ನಡೆದುಕೊಂಡುಬಂದಿರುವ ಮೈಸೂರು ದಸರಾ. ಅದನ್ನು ಆಚರಿಸಿಕೊಂಡು ಬಂದವರು ಮೈಸೂರಿನ ಒಡೆಯರು ಅಥವಾ ಅರಸರು ಅಥವಾ ದೊರೆಗಳು.
ರಾತ್ರಿಯ ಸೂರ್ಯ ಬಲ್ಬಿನಿಂದ ಬರುವ ಬೆಳಕು, ಮನುಷ್ಯನ ಜೀವಜಲ ನಲ್ಲಿನೀರು ಇವೆಲ್ಲವೂ ಅವರು ಕೊಟ್ಟ ಕೊಡುಗೆ. ಒಂದಲ್ಲಾ ಎರಡಲ್ಲಾ ಕೊಡುಗೆಗಳ ಸಾಲೇ ಇದೆ. ಮೈಸೂರಿನ ಅರಸರ ಇತಿಹಾಸ, ಸಮಾಜದ ಅಭಿವೃದ್ಧಿಗೆ ಅವರುಗಳ ಕೊಡುಗೆ ಎಲ್ಲವೂ ಒಂದು ದಂತಕತೆ.
ಆದರೆ ಅದಕ್ಕೂ ಮುಂಚೆ ವಿಜ್ಞಾನ ಒಪ್ಪಿದರೂ ಒಪ್ಪದಿದ್ದರೂ ಇಂದಿಗೂ ನಮ್ಮೆಲ್ಲರ ಮುಂದೆಯೇ ಇರುವ ಸಾಕ್ಷಿ. ನಮ್ಮ ಮೈಸೂರು ಅರಸರ ಜೀವನಕ್ಕೆ ಸಂಬಂಧಿಸಿದ ʼಅಲಮೇಲಮ್ಮನ ಕಥೆ.ʼ ನಮ್ಮೆಲ್ಲರಿಗು ತಿಳಿದಿರುವುದೆ. ಆದರೆ ಆ ಶಾಪವಷ್ಟೇ ಗೊತ್ತು. ಉಳಿದದ್ದು? ಇಲ್ಲಿದೆ.
ಅದು ಸುಮಾರು ಕ್ರಿ.ಶ.610ರ ಸಮಯ. ಶ್ರೀರಂಗಪಟ್ಟಣ, ವಿಜಯನಗರದ ಸಾಮಂತ ರಾಜ್ಯವಾಗಿದ್ದಂತಹ ಕಾಲ. ಆ ದೀಪನಗರಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದವರೇ ತಿರುಮಲ ರಾಜ. ಅವರಿಗಿದ್ದ ಇಬ್ಬರು ರಾಣಿಯರಲ್ಲಿ ಅಲಮೇಲಮ್ಮ ಎರಡನೆಯವರು. ರಾಜರ ಕಾಯಿಲೆ ಎಂದೇ ಹೆಸರಾಗಿದ್ದ ಸಂಧಿವಾತ, ಒಮ್ಮೆ ರಾಜ ತಿರುಮಲನಿಗೂ ಕಾಣಿಸಿತು. ಕಾಯಿಲೆ ಉಲ್ಬಣಗೊಂಡಾಗ ಜ್ಯೋತಿಷಿಗಳ ಸಲಹೆಯ ಮೇರೆಗೆ, ತಿರುಮಲ ರಾಜ ತನ್ನ ಮೊದಲ ಪತ್ನಿಯೊಂದಿಗೆ ಚಿಕಿತ್ಸೆಗಾಗಿ ತಲಕಾಡಿಗೆ ಹೋದರು. ಶ್ರೀರಂಗಪಟ್ಟಣದ ಜವಬ್ದಾರಿ ಉಳಿದ ಎರಡನೇ ರಾಣಿ ಅಲಮೇಲಮ್ಮನ ಹೆಗಲೇರಿತು.


ಶ್ರೀರಂಗಪಟ್ಟಣವನ್ನು ಮೈಸೂರಿನ ತೆಕ್ಕೆಗೆ ತೆಗೆದುಕೊಳ್ಳಲು, ಅರಸ ತಿರುಮಲ ಇಲ್ಲದಿರುವುದನ್ನೇ ಕಾಯುತ್ತಿದ್ದ ಮೈಸೂರಿನ ರಾಜಒಡೆಯರ್ ಶ್ರೀರಂಗಪಟ್ಟಣದ ಮೇಲೆ ದಾಳಿಮಾಡಿ, ಶ್ರೀರಂಗಪಟ್ಟಣವನ್ನು ವಶಕ್ಕೆ ತೆಗೆದುಕೊಂಡರು. ಆ ಸಮಯದಲ್ಲಿ ಶ್ರೀರಂಗನಾಥನ ದೇವಿ ರಂಗನಾಯಕಿಯ ಅಪ್ರತಿಮ ಭಕ್ತೆಯಾಗಿದ್ದರಿಂದ, ಪ್ರತೀ ಶುಕ್ರವಾರ ಮತ್ತು ಮಂಗಳವಾರ ತನಗೆ ಅತ್ಯಂತ ಪ್ರಿಯವಾಗಿದ್ದ ತನ್ನೆಲ್ಲಾ ಒಡವೆಗಳನ್ನು ರಂಗನಾಯಕಿ ದೇವಿಯ ಅಲಂಕಾರಕ್ಕೆ ಕೊಟ್ಟು ಮತ್ತೆ ತಿರುಗಿ ಪಡೆಯುತ್ತಿದ್ದ ರಾಣಿ ಅಲಮೇಲಮ್ಮ ಸಹ ತನ್ನ ಪ್ರಾಣಪ್ರಿಯವಾದ ಒಡವೆಗಳೊಂದಿಗೆ ತಲಕಾಡಿಗೆ ಓಡಿಹೋದಳು.
ಅಲ್ಲಿ ಕಾಯಿಲೆ ಉಲ್ಬಣಗೊಂಡು, ಚಿಕಿತ್ಸೆ ಫಲಕಾರಿಯಾಗದೆ ರಾಜ ತಿರುಮಲ ಅಸುನೀಗಿದರು. ಆಗಿನ ಕಾಲದಲ್ಲಿ ಪತಿಯನ್ನು ಕಳೆದುಕೊಂಡ ವಿದವೆಯರು ಯಾವುದೇ ಒಡವೆಗಳನ್ನು ಹಾಕಿಕೊಂಡು ಅಲಂಕಾರ ಮಾಡಿಕೊಳ್ಳುವ ಹಾಗಿರಲಿಲ್ಲವಾದ್ದರಿಂದ ಮತ್ತು ತಿರುಮಲ ರಾಜನಿಗೆ ಮಕ್ಕಳೂ ಸಹ ಇಲ್ಲವಾದ್ದರಿಂದ ವಾರಕ್ಕೆರಡು ಬಾರಿ ದೇವಿ ರಂಗನಾಯಕಿಯ ಅಲಂಕಾರ ಮಾಡುತ್ತಿದ್ದ ಅಲಮೇಲಮ್ಮನ ಒಡವೆಗಳು ಶಾಶ್ವತವಾಗಿ ದೇವಸ್ಥಾನಕ್ಕೆ ಸಿಕ್ಕಿಬಿಟ್ಟರೆ ಒಳ್ಳೆಯದೇ ಅಲ್ಲವೆ ಎಂಬ ಆಲೋಚನೆ ಶ್ರೀರಂಗಪಟ್ಟಣ ದೇವಸ್ಥಾನದ ಅರ್ಚಕ ವರ್ಗಕ್ಕೆ ಬಂದಿತು. ಅದನ್ನೆ ಮೈಸೂರಿನ ರಾಜಒಡೆಯರಿಗೆ ಹೇಳಿದಾಗ, ಇದು ಅವರಿಗೂ ಸಹ ಸರಿ ಎನ್ನಿಸಿ, ಅಲಮೇಲಮ್ಮನನ್ನು ವಿನಂತಿಸಿ ಒಡವೆಯನ್ನು ತರುವಂತೆ ಹೇಳಿ ರಾಜಒಡೆಯರ್, ರಾಜಭಟರನ್ನು ತಲಕಾಡಿಗೆ ಕಳುಹಿಸುತ್ತಾರೆ. ಆದರೆ ಅಲಮೇಲಮ್ಮ ತನಗೆ ಅತ್ಯಂತ ಪ್ರಿಯವಾದ ಒಡವೆ ಕೊಡುವುದಕ್ಕೆ ಒಪ್ಪುವುದಿಲ್ಲ.
ಆದ್ದರಿಂದ ಒತ್ತಾಯ ಮಾಡಿ ತರುವಂತೆ ರಾಜಒಡೆಯರ್ ಸೈನಿಕರನ್ನು ಕಳುಹಿಸುತ್ತಾರೆ. ಈವಾಗಲೂ ತನ್ನ ಒಡವೆ ಕೊಡಲು ಒಪ್ಪದ ಅಲಮೇಲಮ್ಮ ಆ ಸೈನಿಕರಿಂದ ತಪ್ಪಿಸಿಕೊಂಡು ತನ್ನ ಒಡವೆಗಳೊಂದಿಗೆ ಓಡಲಾರಂಭಿಸಿದಳು.
ಓಡಿ ಓಡಿ ಮಾಲಂಗಿಯ ಕಾವೇರಿ ನದೀತೀರದಲ್ಲಿ ಸೈನಿಕರಿಂದ ತಪ್ಪಿಸಿಕೊಳ್ಳಲಾರದ ಸ್ಥಿತಿಯಲ್ಲಿ ಸಿಕ್ಕಿಕೊಂಡುಬಿಡುತ್ತಾಳೆ. ಇನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದಾಗ, ಅದೇ ಕಾವೇರಿ ನದಿಗೆ ಹಾರಿ ಜೀವಬಿಡುತ್ತಾಳೆ. ಹಾಗೆ ಹಾರುವ ಮುನ್ನ “ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದೆ ಇರಲಿ” ಎಂಬ ಮೂರು ಶಾಪಗಳನ್ನು ಕೊಟ್ಟುಹೋಗುತ್ತಾಳೆ. “ನಾನು ರಂಗನಾಯಕಿಯ ನಿಜವಾದ ಭಕ್ತೆಯೇ ಆಗಿದ್ದರೆ ಮತ್ತು ಪತಿವ್ರತೆಯೇ ಆಗಿದ್ದರೆ ನನ್ನ ಶಾಪಗಳು ಸಹ ನಿಜವಾಗಲಿ” ಎಂದು ಹೇಳೀ ತಾನು ತನ್ನ ಒಡವೆಗಳೊಂದಿಗೆ ಕಾವೇರಿ ನದಿಗೆ ಹಾರುತ್ತಾಳೆ.
ಅಂತೆಯೇ ಅಂದಿನ ಸಮಯದಲ್ಲಿ ಸಂಪದ್ಭರಿತವಾಗಿದ್ದ ತಲಕಾಡು ಮರಳಿನಿಂದ ಆವೃತ್ತವಾಯಿತು. ಸುಮಾರು 30ಕ್ಕೂ ಹೆಚ್ಚು ದೇವಸ್ಥಾನಗಳು ಅಲ್ಲಿ ಮರಳಿನಿಂದ ಮುಚ್ಚಿಹೋಗಿವೆ. ಅಲಮೇಲಮ್ಮ ಹಾರಿದ ಮಾಲಂಗಿಯ ಕಾವೇರಿ ನದಿಯಲ್ಲಿ ದೊಡ್ಡ ದೊಡ್ಡ ಸುಳಿಗಳು ನಿರ್ಮಾಣವಾದವು. ಅದೇ ರೀತಿ ಮೈಸೂರು ರಾಜರಿಗೆ ಮಕ್ಕಳಾಗುತ್ತಿಲ್ಲ. ಆದ್ದರಿಂದ ದತ್ತು ಪಡೆಯಲಾಗುತ್ತಿದೆ. ಹದಿನೇಳನೇ ಶತಮಾನದಿಂದ ಇಲ್ಲಿಯವರೆಗೆ ಏಳುಜನ ರಾಜರು ದತ್ತುಪುತ್ರರೇ ಆಗಿದ್ದಾರೆ. ಮೊದಮೊದಲಿಗೆ ಆ ಶಾಪವನ್ನು ಗಂಭೀರವಾಗಿ ಪರಿಗಣಿಸದಿದ್ದ ಒಡೆಯರು, ಶಾಪ ನಿಜವಾಗುತ್ತಿದೆ ಎಂಬುದನ್ನು ಮನಗಂಡ ನಂತರ ಶಾಪವಿಮೋಚನೆಗಾಗಿ ಅಲಮೇಲಮ್ಮನ ಒಂದು ಬಂಗಾರದ ಮೂರ್ತಿ ಮಾಡಿಸಿ, ಅದಕ್ಕೆ ಪೂಜಿಸಲಾರಂಭಿಸಿದರು. ಇಂದಿಗೂ ಸಹ ಪ್ರತೀ ದಸರಾದಲ್ಲಿ ಅಲಮೇಲಮ್ಮನ ಬಂಗಾರದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಇದು ಚರಿತ್ರೆ. ನಂತರ ನಡೆದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಮತ್ತು ನಾವೆಲ್ಲರೂ ಇಂದಿಗೂ ಅವುಗಳಿಂದ ಪ್ರಯೋಜನ ಪಡೆಯುತ್ತಿರುವ ಸಾಧನೆ.
1805ರಿಂದ ಹೆಚ್ಚುಕಡಿಮೆ 1950ರವರೆಗೆ ಕಣ್ಣಿನ ಆಸ್ಪತ್ರೆ, ವಿದ್ಯುತ್ ಸಂಪರ್ಕ್ , ಅಣೆಕಟ್ಟೆ, ಭಾರತೀಯ ವಿಜ್ಞಾನ ಸಂಸ್ಥೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೃಷಿ ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ, ಯುವರಾಜ ಕಾಲೇಜು, ಮಹಾರಾಣೀ ಮಹಿಳಾ ಕಾಲೇಜು, ಲಲಿತ ಮಹಲ್ ಅರಮನೆ, ಬೆಂಗಳೂರಿನ ವಿಜ್ಞಾನ ಕಾಲೇಜು, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ‍್ಖಾನೆ, ಮೈಸೂರು ಮೆಡಿಕಲ್ ಕಾಲೇಜು, ಕೃಷ್ಣರಾಜನಗರ ಸ್ಥಾಪನೆ, ನಿಮಾನ್ಸ್ ಆಸ್ಪತ್ರೆ, ಕೃಷ್ಣರಾಜ ಆಸ್ಪತ್ರೆ, ಬೆಂಗಳೂರಿನ ಕೆ ಆರ್ ಮಾರುಕಟ್ಟೆ, ಮಂಡ್ಯ ಸಕ್ಕರೆ ಕಾರ‍್ಖಾನೆ, ಕೆ ಆರ್ ಮಿಲ್, ಸಂತ ಫಿಲೊಮಿನ ಚರ್ಚ್, ಮೈಸೂರು ಪೇಪರ್ ಮಿಲ್ ಭದ್ರಾವತಿ, ಸಿ ಎಫ್ ಟಿ ಆರ್ ಐ, ದೇವರಾಜ ಮಾರುಕಟ್ಟೆ, ಲ್ಯಾಂಡ್ಸ್ಡೌನ್ ಬಿಲ್ಡಿಂಗ್, ಡಿಸಿ ಆಫೀಸ್ ಅಥವಾ ಅಠಾರಾ ಕಛೇರಿ.. ಹೀಗೆ ಲೆಕ್ಕವಿಲ್ಲದಷ್ಡು ವ್ಯವಸ್ಥೆಗಳನ್ನ ಕಟ್ಟಿಕೊಟ್ಟವರು ನಮ್ಮ ಮೈಸೂರಿನ ದೊರೆಗಳು.
ಹಾಗೆಯೆ ಬಾಲ್ಯ ವಿವಾಹ ರದ್ದತಿ, ಮಹಿಳಾ ಶಿಕ್ಷಣಕ್ಕೆ ಒತ್ತು, ಹಿಂದುಳಿದವರ ಸುಧಾರಣೆಗಾಗಿ ಮೀಸಲಾತಿ ಹೀಗೆ ಹಲವಾರು ಸುಧಾರಣೆಗಳನ್ನು ಸಹ ತಂದ ಮಹಾನುಭಾವರು.
ಈ ಎಲ್ಲಾ ಅಭಿವೃದ್ಧಿ ಕಾರ‍್ಯಗಳ ಜೊತೆಗೆ ಮತ್ತೂ ಇನ್ನಷ್ಟು ನಮಗೆ ತಿಳಿಯದಂತೆ ಲೆಕ್ಕಕ್ಕೆ ಸಿಗದೆ ಮರೆಯಾಗುವ ಅಭಿವೃದ್ಧಿ ಕೆಲಸಗಳು ಅದೆಷ್ಟೊ.


ಇಷ್ಟೆಲ್ಲಾ ಕಾಣಿಕೆ ಕೊಟ್ಟ ಮೈಸೂರಿನ ಒಡೆಯರು ಒಟ್ಟು ಇಪ್ಪತೈದು ಜನ. ಅವರೆಲ್ಲರೂ ಕೂಡಾ ನುಡಿದಂತೆ ನಡೆದವರು, ನಡೆದಂತೆ ನುಡಿದವರು. ಅವರಲ್ಲಿ 13 ಜನ ದೀಪನಗರಿ ಶ್ರೀರಂಗಪಟ್ಟಣದಲ್ಲಿದ್ದುಕೊಂಡು ಮೈಸೂರಿಗಾಗಿ ಶ್ರಮಿಸಿದವರು. ನಂತರ ಬಂದ ನಾಲ್ಕು ಜನ ಒಡೆಯರು ಸುಂದರ ನಗರಿ ಮೈಸೂರಿನಲ್ಲಿದ್ದವರು.
1799ರ ಜೂನ್ 30ನೇ ತಾರೀಕಿನಂದು ಐದು ವರ್ಷದ ಒಬ್ಬ ರಾಜ ಆಡಳಿತಕ್ಕೆ ಬಂದರು. ಅಲ್ಲಿಂದ ಇಲ್ಲಿಯವರೆಗೆ ಒಟ್ಟು 4 ಜನ ಪ್ರಮುಖ ರಾಜರು ಮತ್ತು ಇಬ್ಬರು ರಾಜಕುಮಾರರು ಬಂದಿದ್ದಾರೆ.
ಮೈಸೂರು ಸಂಸ್ಥಾನದ ಮೊದಲ ಪ್ರಮುಖ ಮಹಾರಾಜ ಮುಮ್ಮಡಿ ಅಥವಾ ಮೂರನೇ ಕೃಷ್ಣರಾಜ ಒಡೆಯರ್. ನಂತರ ಬಂದವರು ಅವರ ದತ್ತುಪುತ್ರ ಹತ್ತನೇ ಚಾಮರಾಜೇಂದ್ರ ಒಡೆಯರ್. ಅವರ ಧರ್ಮಪತ್ನಿ ಕೆಂಪನಂಜಮ್ಮಣ್ಣಿ. ಅವರಿಗಿದ್ದ ಇಬ್ಬರು ಪುತ್ರರಲ್ಲಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಜ್ಯೇಷ್ಠಪುತ್ರ ಮತ್ತು ಕಂಠೀರವ ನರಸಿಂಹರಾಜ ಒಡೆಯರ್ ಎರಡನೆಯವರು. ಹತ್ತನೇ ಚಾಮರಾಜೇಂದ್ರ ಒಡೆಯರ್ ನಂತರದ ರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್. ಇವರ ನಂತರ ಬಂದವರು, ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ಮಗನಾದ, ಜಯಚಾಮರಾಜೇಂದ್ರ ಒಡೆಯರ್. ಅವರ ಮೊದಲ ರಾಣಿ ಸತ್ಯಪ್ರೇಮ ಕುಮಾರಿ.
ಜಯಚಾಮರಾಜೇಂದ್ರ ಒಡೆಯರ್ ಮತ್ತು ಸತ್ಯಪ್ರೇಮ ಕುಮಾರಿ ಅವರ ಮಗನೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಪತ್ನಿ ಪ್ರಮೋದಾದೇವಿ ಒಡೆಯರ್. ಇಬರಿಬ್ಬರ ದತ್ತುಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಪತ್ನಿ ತ್ರಿಷಿಕಾ ಕುಮಾರಿ. ಇವರ ಜ್ಯೇಷ್ಠಪುತ್ರ ಆದ್ಯವೀರ್ ನರಸಿಂಹರಾಜ ಒಡೆಯರ್.
(ಮುಮ್ಮಡಿ ಕೃಷ್ಣರಾಜ ಒಡೆಯರ್ – ಹತ್ತನೇ ಚಾಮರಾಜೇಂದ್ರ ಒಡೆಯರ್ – ನಾಲ್ವಡಿ ಕೃಷ್ಣರಾಜ ಒಡೆಯರ್ – ಜಯಚಾಮರಾಜೇಂದ್ರ ಒಡೆಯರ್ – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ – ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ – ಆದ್ಯವೀರ್ ನರಸಿಂಹರಾಜ ಒಡೆಯರ್..)
ಮೊದಲ 12-13 ರಾಜರ ಆಳ್ವಿಕೆಯವರೆಗೂ ಸತಿಸಹಗಮನ ಪದ್ಧತಿ ಇತ್ತು. ಮೊದಲ ಬಾರಿಗೆ ಕೊಲ್ಕತ್ತಾದಲ್ಲಿ ಸತಿಸಹಗಮನ ಪದ್ಧತಿ ವಿರುದ್ದ ಹೋರಾಟ ನಡೆದ ಪ್ರಭಾವ ನಂತರ ಮೈಸೂರಿನ ಒಡೆಯರ್ ಮನೆತನದಲ್ಲೂ ಸಹ ಸತಿಸಹಗಮನ ಪದ್ಧತಿಯನ್ನು ನಿಲ್ಲಿಸಲಾಯಿತು.
ಪ್ರಸ್ತುತ ಇರುವ ಅಂಬಾವಿಲಾಸ ಅರಮನೆ 5ನೆಯ ಅರಮನೆ. ಇದಕ್ಕೂ ಮುಂಚೆ ಇದ್ದದ್ದು 95 ವರ್ಷದ ಹಳೆಯ ಮರದ ಅರಮನೆ. ಹಾಗಾದರೆ ಅದೇನಾಯಿತು? ಈ ಅರಮನೆ ಏಕೆ ಬಂತು? ಈ ಕಥೆಯನ್ನು ನೋಡಿಬರುವ.
ಮರದ ಅರಮನೆ
ಮರದ ಅರಮನೆಯಲ್ಲಿದ್ದದ್ದು ಇಂದಿನ ಅರಮನೆಯ ಜಯರಾಮ ಬಲರಾಮ ಗೇಟಿನ ಎದುರಗಡೆ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ನಿಲ್ಲಿಸಲಾಗಿರುವ ಅಮೃತಶಿಲೆಯ ಪ್ರತಿಮೆಯಲ್ಲಿರುವ ರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್.
ಹತ್ತನೇ ಚಾಮರಾಜೇಂದ್ರ ಒಡೆಯರ್ 1894ರಲ್ಲಿ ಅಖಿಲ ಭಾರತೀಯ ವೈದ್ಯಕೀಯ ಸಮ್ಮೇಳನದ ಉದ್ಘಾಟನೆಗೆಂದು ಕೋಲ್ಕತ್ತಾಗೆ ಹೋಗಿದ್ದಂತಹ ಸಮಯದಲ್ಲಿ. ಉದ್ಘಾಟನೆ ಮಾಡಿದ ರಾತ್ರಿ ಗಂಟಲುಬೇನೆ(ಡಿಫ್ತೀರಿಯಾ) ಬಂದು ನಿಧನರಾದರು. ಕೊಲ್ಕೊತ್ತಾ ನಗರದ ಮುಖ್ಯ ನ್ಯಾಯಾದೀಶ (ಚೀಫ್ ಜಸ್ಟೀಸ್) ಗುರುನಾಥ್ ಬ್ಯಾನರ‍್ಜಿಯವರು “ನಾವು ಕೋಲ್ಕತ್ತಾದವರು ಮೈಸೂರಿಗಿಂತ ಚೆನ್ನಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆ” ಎಂದು ಕೆಂಪನಂಜಮ್ಮಣ್ಣಿಯವರಿಗೆ ಮಾತು ಕೊಟ್ಟು, ಕೋಲ್ಕತ್ತಾದ ಗಂಗಾನದಿಯ ಪಕ್ಕದಲ್ಲಿರುವ ಕಾಳಿಘಾಟ್ ನಲ್ಲಿ ಅವರ ಪಾರ‍್ಥೀವ ಶರೀರದ ಅಂತ್ಯಸಂಸ್ಕಾರ ಮಾಡಿದರು. ಅವರ ನೆನಪಿಗಾಗಿ ಇಂದಿಗೂ ಸಹ ಪ್ರತೀವರ್ಷ ಆ ದಿನ ಕೋಲ್ಕತ್ತ ನಗರ ಅನ್ನದಾನವನ್ನು ಏರ್ಪಡಿಸುತ್ತಾ ಬಂದಿದೆ.
ಕೆಂಪನಂಜಮ್ಮಣ್ಣಿಯವರ ಅವರ ಜ್ಯೇಷ್ಠ ಪುತ್ರಿ ಜಯಲಕ್ಷ್ಮಮ್ಮಣ್ಣಿಯವರ ಮದುವೆ ಸಂದರ್ಭದಲ್ಲಿ ಐದನೇ ದಿನದ ಶಾಸ್ತ್ರವಾದ ಗುರುಟಣೆ ಉಯ್ಯಾಲೆ ಮಾಡುವ ದಿನ, ಆ ಶಾಸ್ತ್ರಕ್ಕೂ ಮೊದಲೇ, ಅರಮನೆಯ ಸಹಾಯಕಿಯರು (ಅವ್ಯಯರು) ಅಡುಗೆ ಮನೆಯಿಂದ ಕಾಯಿಸಿದ ಹಾಲು ಮತ್ತು ಬೆಂಕಿಯನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಗಾಳಿ ಜೋರಾಗಿ ಬೀಸಿದ್ದರಿಂದ, ಆ ಬೆಂಕಿ ಚಪ್ಪರದ ಮೇಲೆ ಬಿದ್ದು ಅರಮನೆಯುದ್ದಗಲಕ್ಕೂ ಪಸರಿಸಿತು. ಆದಕಾರಣ 1897ರ ಫೆಬ್ರವರಿ 27ನೇ ತಾರೀಖು ಭಾನುವಾರ ಬೆಳಗ್ಗೆ 9 ಗಂಟೆಗೆ, ಆಕಸ್ಮಿಕ ಬೆಂಕಿಯಲ್ಲಿ ಆ ಮರದ ಅರಮನೆ ಸುಟ್ಟುಹೋಯಿತು.
ಅಂದು ಭಾನುವಾರ ಜೊತೆಗೆ ಯಂತ್ರ ಕೆಟ್ಟುಹೋಗಿದ್ದರಿಂದ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ, ಕೆರೆಯು ಬತ್ತಿಹೋಗಿತ್ತು. ಜನ ಸಾಲಾಗಿ ನಿಂತು ಆ ಕೆರೆಯಲ್ಲಿದ್ದ ಕೆಸರನ್ನೇ ತುಂಬಿಕೊಂಡು ಬಂದು ಅದರಿಂದಲೇ ಬೆಂಕಿ ನಂದಿಸಲು ಪ್ರಯತ್ನಿಸಿದರು. ಇದ್ದಂತಹ ಒಂದೇ ಒಂದು ಅಗ್ನಿಶಾಮಕ ದಳ ಬೆಂಗಳೂರಿನಲ್ಲಿತ್ತು. ಅದು ಮೈಸೂರಿಗೆ ಬರುವುದರೊಳಗಾಗಿ ಅರಮನೆ ಉರಿದುಹೋಗಿತ್ತು.
ಆ ಅರಮನೆ ಧಗಧಗನೆ ಉರಿಯುವಾಗ 12 ವರ್ಷದ ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರ್, ಕಣ್ಣೀರು ಹಾಕುತ್ತಾ ನಿಂತಿದ್ದ ಅರಮನೆಯ ಮುಸ್ಲಿಂ ಸೇವಕ ವೃದ್ಧನಿಗೆ “ಅಳಬೇಡಿ ತಾತ ಇದು ಪ್ರಕೃತಿಸಹಜ. ಇದಕ್ಕಿನ್ನ ಭವ್ಯವಾದ ಅರಮನೆಯನ್ನು ನಾನು ಕಟ್ಟಿಸುತ್ತೇನೆ” ಎಂದು ಸಮಾಧಾನ ಮಾಡಿ, ಅಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರೌಢಿಮೆ ಮೆರೆಯುತ್ತಾರೆ.
ಅದಾದ ಒಂದು ವಾರದಲ್ಲೆ ಅನಾಹುತಕ್ಕೆ ಕಾರಣವನ್ನು ಕುರಿತು ನೂರು ಪುಟಗಳ ವಿವರಣೆಯನ್ನು ತೆಗೆದುಕೊಂಡ ರಾಣಿ ಕೆಂಪನಂಜಮ್ಮಣ್ಣಿಯವರು, 15 ದಿನಗಳಲ್ಲೇ ಅರಮನೆಯ ನವನಿರ‍್ಮಾಣಕ್ಕೆ ಯೋಜನೆಗಳನ್ನೂ ರೂಪಿಸಲು ಆರಂಭಿಸಿದರು.
ಆ ಸಮಯದಲ್ಲಿ ಮದುವೆಗೆ ಬಂದಿದ್ದ ಜನರೆಲ್ಲರನ್ನೂ ಜೋಪಾನವಾಗಿ ಬ್ರಹ್ಮಪುರಿ ದ್ವಾರದಿಂದ ಜಗನ್ಮೋಹನ ಅರಮನೆಗೆ ಕಳುಹಿಸಲಾಯಿತು. ಹಾಗಾಗಿ ಯಾರಿಗೂ ಏನೂ ತೊಂದರೆ ಆಗಲಿಲ್ಲ.
ಕಿಳ್ಳೆ ಮೊಹಲ್ಲಾದ ಜನರೆಲ್ಲ ಸೇರಿ ಅರಮನೆಯ ಒಳಗಿದ್ದ ಅಂಬಾರಿ ವಜ್ರ ವೈಡರ‍್ಯ ಎಲ್ಲವನ್ನೂ ಈಚೆಗೆ ಸಾಗಿಸಿದರು. ಆದರೆ ಇದೆಲ್ಲವನ್ನೂ ಸಾಗಿಸುವಾಗ ಅರಮನೆಯ 4 ನೌಕರರು ಮತ್ತು ಬೆಂಕಿಯನ್ನು ನಂದಿಸಲು ಬಂದ 4 ಜನ ನೌಕರರು ಧಾರುಣವಾಗಿ ಬೆಂಕಿಯಲ್ಲಿ ಸುಟ್ಟು ಸತ್ತುಹೋದರು. ಆ 8 ಜನರ ಕುಟುಂಬಕ್ಕೆ ರಾಣಿ ಕೆಂಪನಂಜಮ್ಮಣ್ಣಿಯವರು ಒಂದು ವಾರದೊಳಗೆ ಪುನರ‍್ವಸತಿ ನಿರ‍್ಮಿಸಿಕೊಟ್ಟು, ಉದ್ಯೋಗ ಕೊಟ್ಟು ನೋಡಿಕೊಂಡರು.
ಅಂಬಾವಿಲಾಸ ಅರಮನೆ
ಶಿಮ್ಲಾದಲ್ಲಿರುವ ವೈಸ್ ರಾಯ್ ಭವನವನ್ನು ವಿನ್ಯಾಸಗೊಳಿಸಿದ, ಸರ್ ಹೆನ್ರಿ ಇರ‍್ವಿನ್ ನ್ನು ಕರೆಸಿ ಅರಮನೆಯ ವಿನ್ಯಾಸವನ್ನು ಮಾಡಿಕೊಡುವಂತೆ ಕೇಳಿಕೊಳ್ಳಲಾಯಿತು. ೬ ತಿಂಗಳುಗಳ ಕಾಲ ಮೈಸೂರಿನಲ್ಲೇ ಇದ್ದಂತಹ ಇರ‍್ವಿನ್, (ಇವಾಗಿನ ಮೈಸೂರಿನ ಇರ‍್ವಿನ್ ರಸ್ತೆ)ಅರಮನೆಯ ವಿನ್ಯಾಸವನ್ನು ಮಾಡಿಕೊಟ್ಟಿದ್ದಕ್ಕಾಗಿ, ಕೆಂಪನಂಜಮ್ಮಣ್ಣಿಯವರು ಅವನಿಗೆ ರೂ.೧೨೦೦೦ ಸಂಭಾವನೆಯನ್ನು ಕೊಡುತ್ತಾರೆ. ಇವಾಗಿನ ಅಂಬಾವಿಲಾಸ ಅರಮನೆಯನ್ನು ಕಟ್ಟಿದ ಇಂಜಿನಿಯರ್ ಬಿ ಪಿ ರಾಘವಲು ನಾಯ್ಡು. ರಾಣಿ ಕೆಂಪನಂಜಮ್ಮಣ್ಣಿಯವರು, ಬಿ ಪಿ ರಾಘವಲು ನಾಯ್ಡು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಮೂರೂ ಜನರು ಕುಳಿತು ಅರಮನೆಯನ್ನು ಕಟ್ಟುವ ಬಗ್ಗೆ ಚರ್ಚೆಮಾಡಿ ವಿಶ್ವದ ಅತೀ ಶ್ರೇಷ್ಠ ವಸ್ತುಗಳೆಲ್ಲವೂ ಅರಮನೆಯಲ್ಲಿರಬೇಕು, ಶ್ರೇಷ್ಠ ಕೆಲಸಗಾರರು ಅರಮನೆಗಾಗಿ ಕೆಲಸ ಮಾಡಬೇಕು ಎಂಬ ತೀರ‍್ಮಾನ ತೆಗೆದುಕೊಳ್ಳುತ್ತಾರೆ.
ಹಾಗಾಗಿ ಅಮರಶಿಲ್ಪಿ ಜಕ್ಕಣ್ಣಾಚಾರಿಯ ವಂಶಜರನ್ನು ಮತ್ತು ಆಗ್ರಾದಲ್ಲಿ ತಾಜ್ ಮಹಲ್ ನಿರ‍್ಮಿಸಿದ ಸಂತಾನದವರನ್ನು ಕರೆಸಲಾಗುತ್ತದೆ. 3000 ವರ್ಷಗಳಷ್ಟು ಪ್ರಾಚೀನವಾದ ಭೂಕಂಪನರಹಿತ ಚಾಮುಂಡಿ ಬೆಟ್ಟ ಎಂದು ವಿಜ್ಞಾನಿಗಳು ಹೇಳಿರುವ ಚಾಮುಂಡಿ ಬೆಟ್ಟದಲ್ಲಿದ್ದಂತಹ ಕೆಂಪುಶಿಲೆಗಳನ್ನು ತರಿಸಿ ಶೇಶಾದ್ರಿ ಐಯ್ಯರ್ ವರು ಅರಮನೆಗೆ ಉದ್ದನೆಯ ಕಂಬಗಳನ್ನು ನಿಲ್ಲಿಸಿದರು. 12 ವರ್ಷಗಳ ಕಾಲ ಅಂಬಾವಿಲಾಸ ಅರಮನೆಗೋಸ್ಗರ ಸಾವಿರಾರು ಕೈಗಳು ಕೆಲಸ ಮಾಡಿದವು.
ಎಚ್ ವೈ ಶಾರದಾಪ್ರಸಾದ್ ಅವರ ತಂದೆ ಯೋಗನರಸಿಂಹಂ 1916ರ ಮೈಸೂರು ವಿಶ್ವವಿದ್ಯಾನಿಲಯದ ಮೊದಲ ತಂಡ(ಬ್ಯಾಚ್) ವಿದ್ಯಾರ‍್ಥಿಯಾದ ಸಂಗಿತ ವಿದ್ವಾನ್ ಅವರ ತಂದೆ ನಾರಾಣಪ್ಪ, ಹೊಳೆನರಸೀಪುರದಿಂದ ಕಾಲುನಡಿಗೆಯಲ್ಲಿ ಬಂದು ಅರಮನೆಯ ಟ್ರೆಷರಿಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿ ಆರ್ಥಿಕ ಪಾರದರ್ಶಕತೆಯನ್ನು ಮೆರೆದವರು. ಹಾಗಾಗಿಯೆ ಇವಾಗಿರುವ ಆಂಬಾವಿಲಾಸ ಅರಮನೆ ಕಟ್ಟಲು ಖರ್ಚಾದ 49 ಲಕ್ಷದ 63 ಸಾವಿರದ 913 ರೂಪಾಯಿಗಳ ಲೆಕ್ಕವನ್ನು ಕರಾರುವಕ್ಕಾಗಿ ದಾಖಲಿಸಿದ್ದಾರೆ.
ಪ್ರತಿದಿನವೂ ಸಂಜೆ ಅರಮನೆಯ ಲೈಟುಗಳನ್ನು ಆನ್ ಮಾಡುವುದಕ್ಕಾಗಿ ಕಾದು ನೋಡುವಾಗ ಸರಿಯಾಗಿ 7 ಗಂಟೆಗೆ ಝಗಮಗಿಸುವ ಒಂದು ಲಕ್ಷಕ್ಕೂ ಹೆಚ್ಚಿನ ಬಲ್ಬುಗಳು ಸಾಮಾನ್ಯ ಬಲ್ಬುಗಳಲ್ಲ. ಅವು ಸ್ಕ್ರೂ(ತಿರುಪು) ಇರುವ ಬಲ್ಬುಗಳು. ಇವುಗಳನ್ನು ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್ ಕರ್ನಲ್ ಬ್ರಿಕ್ಸ್ ಎಂಬ ಮಹಾಶಯ ಹಾಕಿದನು. ಇಂತಹ ಬಲ್ಬುಗಳನ್ನು ಅರಮನೆಯಲ್ಲಿ ಬಿಟ್ಟು ಬೇರೆಲ್ಲೂ ಕಾಣಲು ಸಿಗುವುದಿಲ್ಲ.
ಮೊದಲಿನ ಮರದ ಅರಮನೆಯಲ್ಲಿ ಇದ್ದಂತಹ ಡೈನಮೋ ವಿದ್ಯುತ್ ರೀತಿ, ಮೊದಲಿಗೆ ಈ ಅರಮನೆಗೆ ವಿದ್ಯುತ್ ಬೆಳಕನ್ನು ಕೊಟ್ಟವರು ಶೇಷಾದ್ರಿ ಐಯ್ಯರ್ ರವರು.
ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈವಾಗ ವಾಸಿಸುತ್ತಿರುವ ಅರಮನೆಯಲ್ಲಿ ಮೊದಲಿನ ಮರದ ಅರಮನೆಯನ್ನು ಕಾಣಬಹುದು
1907ನೇ ಇಸವಿಯಲ್ಲಿ ಗೃಹಪ್ರವೇಶ ಆಗಿ ಪ್ರವಾಸಿಗರಿಗೂ ತೆರೆದಿಡಲಾದ ಅಂಬಾವಿಲಾಸ ಅರಮನೆಯ ಸಂಪೂರ್ಣ ಕಾಮಗಾರಿ 1912ರಲ್ಲಿ ಮುಕ್ತಾಯವಾಯಿತು.
ಮೈಸೂರು ಒಡೆಯರುಗಳ ವಿವರ
ಮೈಸೂರಿನ ಮೊದಲ ಹೆಸರಾಂತ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಭಾರತೀಯ ಶಿಕ್ಷಣವನ್ನು ಪಡೆದವರು, ಯುದ್ಧನೀತಿಯಲ್ಲಿ ಪರಿಣಿತಿ ಹೊಂದಿದ ಇವರು ದೀರ್ಘಾಯುಷಿ.
ಅವರ ಮಗ 10ನೇ ಚಾಮರಾಜೇಂದ್ರ ಒಡೆಯರ್ ಬೆಂಗಳೂರು ಅರಮನೆಯಲ್ಲಿ ಓದಿ, ಪಾಶ್ಚಾತ್ಯ ವಿದ್ಯಾಭ್ಯಾಸವನ್ನು ಮನೆಯ ಮೇಷ್ಟ್ರರಾಗಿ ಬರುತ್ತಿದ್ದ ಪ್ರೊ ಮಾಲೆಸನ್ ಎಂಬುವವರಿಂದ ಕಲಿತವರು. ಪ್ರೊ ಮಾಲೆಸನ್ ನಂತರದ ದಿನಗಳಲ್ಲಿ 10ನೇ ಚಾಮರಾಜೇಂದ್ರ ಒಡೆಯರ್ ಗೆ ಪೋಷಕರಾಗಿ, ನಂತರ ಗೆಳೆಯರೂ ಆದವರು.
ಮಹಾರಾಜರನ್ನು ಕಳೆದುಕೊಂಡಂತಹ ಕೆಂಪನಂಜಮ್ಮಣ್ಣಿಯವರು, ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಅತ್ಯತ್ತಮ ಶಿಕ್ಷಣವನ್ನು ಕೊಡಿಸಬೇಕೆಂಬ ಬಯಕೆಯಲ್ಲಿ, ಇಂದಿಗೂ ಪ್ರೇಜರ್ ಟೌನ್ ಎಂದು ಅವರ ಹೆಸರಿನಲ್ಲಿರುವಷ್ಟು ಪ್ರಸಿದ್ದಿ ಪಡೆದಿರುವ ಪ್ರೇಜರ್ ಅವರನ್ನು ಕರೆಸಿದರು. ಅವರು ಆಡಳಿತದ ಪ್ರತಿಯೊಂದು ಅಂಶಗಳನ್ನು ನಾಲ್ವಡಿಯವರನ್ನು ಹೊರಗೆ ಕರೆದುಕೊಂಡುಹೋಗಿ ತೋರಿಸಿ ಹೇಳಿಕೊಟ್ಟರು
ʼಕರ್ನಲ್ʼ ಎಂಬ ಬಿರುದ್ದು ತೆಗೆದುಕೊಂಡಿದ್ದ, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾನ್ಯ ಶಾಲೆಯಲ್ಲೇ ಓದಿದವರು. ಆದರೆ ಪ್ರೇಜರ್, ನಾಲ್ವಡಿಯವರಿಗೆ ಆಡಳಿತದ ಬಗ್ಗೆ ವಿವರವಾಗಿ ಹೇಳಿಕೊಟ್ಟರು, 6 ವರ್ಷಗಳ ಕಾಲ ಪ್ರತಿಯೊಂದನ್ನು ಪ್ರಾಯೋಗಿಕವಾಗಿ ಕರೆದುಕೊಂಡು ಹೋಗಿ ತೋರಿಸಿ ಹೇಳಿಕೊಟ್ಟರು. ನ್ಯಾಯಾಲಯದಲ್ಲಿ ಕೂರಿಸಿಕೊಂಡು ಕೋರ್ಟ್ ಕಲಾಪವನ್ನು ತೋರಿಸುತ್ತಿದ್ದರು, ನದಿಗಳ ಹತ್ತಿರ ಕರೆದುಕೊಂಡು ಹೋಗುತ್ತಿದ್ದರು. ವ್ಯವಹರಿಸುವುದನ್ನು ಹೇಳಿಕೊಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ, ಸಂಸ್ಕೃತ, ಉರ್ದು, ಹಿಂದಿ & ಇಂಗ್ಲಿಷ್ ಭಾಷೆಗಳನ್ನು ಬಲ್ಲವರಾಗಿದ್ದರು. ಬುದ್ಧ, ಗಯಾ ಕ್ಷೇತ್ರಗಳನ್ನು ನೋಡಿಬಂದವರು. ಜಗತ್ತನ್ನು 2 ಬಾರಿ ಸುತ್ತಿ ಬಂದವರು. ಇಂಗ್ಲೆಂಡ್, ಅಮೇರಿಕಾದಲ್ಲಿದ್ದ ಪ್ರಜಾಪ್ರಭುತ್ವದ ಬಗ್ಗೆ ಖುದ್ದು ನೋಡಿ ತಿಳಿದವರು. ಇಂಗ್ಲೀಷಿನವರಿಗಿಂತ ಇಂಗ್ಲಿಷನ್ನು ಅಚ್ಚುಕಟ್ಟಾಗಿ ಮಾತನಾಡಬಲ್ಲವರಾಗಿದ್ದರು ಎಂಬುದನ್ನು ಇಂಗ್ಲೀಷಿನವರೆ ಬರೆದಿಟ್ಟಿರುವ ದಾಖಲೆಗಳಿವೆ. ವಿದೇಶಿ ಪತ್ರಿಕೆಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಆಧುನಿಕ “ಜನಕ ಮಹಾರಾಜ” ಎಂದು ಕರೆಯಲಾಗಿದೆ.
10ನೇ ಚಾಮರಾಜೇಂದ್ರ ಒಡೆಯರ್ ತಂದೆಗೆ ತಕ್ಕ ಮಗ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರನ್ನು 1902ರಿಂದ 1939ರವರೆಗೆ ಆಳಿದ ಮಹಾರಾಜ. ಸರ್ಕಾರದ ದಾಖಲೆಗಳಲ್ಲಿಯೂ ಸಹ ದಾಖಲಿಸಿರುವಂತೆ, ಸತತವಾಗಿ 6 ವರ್ಷಗಳ ಕಾಲ ದಿವಸಕ್ಕೆ 16 ಗಂಟೆ ಓದುತ್ತಿದ್ದ ರಾಜ. ಇವರು ಜ್ಞಾನಬಲದ ಮೇಲೆ ರಾಜರಾದವರು. ಆದ್ದರಿಂದಲೇ ʼನಾಲೆಡ್ಜ್ ಕಿಂಗ್ʼ ಎಂದು ಕರೆಸಿಕೊಂಡವರು. ಮಹಾಮಹೋಪಾಧ್ಯಾಯ, ಇಂಟರ್ ನ್ಯಾಷನಲಿಷ್ಟ್ ವಿ.ಎಸ್. ಶ್ರೀನಿವಾಸಶಾಸ್ತ್ರಿಯವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನವಾದ ರಾತ್ರಿ ಮದ್ರಾಸ್ ಆಕಾಶವಾಣಿಯಲ್ಲಿ ನಾಲ್ವಡಿಯವರನ್ನು ʼರಾಜಶ್ರೀ(ಸೇಂಟ್ ಕಿಂಗ್) ಅಂದರೆ ಅವರು ರಾಜರೂ ಹೌದು ಋಷಿಯೂ ಹೌದುʼ ಎಂದು ಕರೆದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕಂಠೀರವ ನರಸಿಂಹರಾಜ ಒಡೆಯರ್ ಜೋಡೆತ್ತುಗಳಿದ್ದ ಹಾಗೆ. 1885ರಲ್ಲಿ ಬಂದಂತಹ ʼಮೈಸೂರು ಪ್ರಜಾಪ್ರತಿನಿಧಿ ಸಭಾʼಗೆ ಕಂಠೀರವ ನರಸಿಂಹರಾಜ ಒಡೆಯರ್ ರವರನ್ನು ʼಎಕ್ಟ್ರಾರ್ಡಿನರಿ ಸ್ಪೆಷಲ್ ಮೆಂಬರ್ʼ ಎಂದು ಗೆಜೆಟ್ ನೋಟಿಫಿಕೇಶನ್ ಆಗಿತ್ತು. ಅವರಿಬ್ಬರು ಅಣ್ಣನಿಗೆ ತಕ್ಕ ತಮ್ಮ, ತಮ್ಮನಿಗೆ ತಕ್ಕ ಅಣ್ಣನಂತೆ ಇದ್ದರು.
ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಕಂಠೀರವ ನರಸಿಂಹರಾಜ ಒಡೆಯರ್ ಗೆ ಮಗು ಜನಿಸಿದಂತಹ ಸಮಯದಲ್ಲಿ ಇಂಗ್ಲೆಂಡಿಗೆ ಜಯವಾದ್ದರಿಂದ ಅದು ನಮಗೂ ಸಹ ಜಯ ಎಂದು ಭಾವಿಸಿ, ಆ ಮಗುವಿಗೆ ಜಯಚಾಮರಾಜೇಂದ್ರ ಒಡೆಯರ್ ಎಂದು ನಾಮಕರಣ ಮಾಡಲಾಯಿತು. ಇವರು ಮಹಾರಾಜ ಕಾಲೇಜಿನ ಫಿಲಾಸಫಿ ಮತ್ತು ಇತಿಹಾಸದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ರಾಜ್ಯಶಾಸ್ತ್ರ ವಿದ್ಯಾರ್ಥಿ. ಹಲವಾರು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದಂತಹ ಇವರು ರಾಜಕೀಯದಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಸತ್ಯಪ್ರೇಮ ಕುಮಾರಿ, ಪ್ರಮೋದಾ ದೇವಿ ಒಡೆಯರ್, ತ್ರಿಷಿಕಾ ಕುಮಾರಿ ದೇವಿ ಈ ಮೂರು ರಾಣಿಯರನ್ನು ಬಿಟ್ಟು ಉಳಿದ ಎಲ್ಲಾ ರಾಣಿಯರ ಹೆಸರು ʼಅಮ್ಮಣ್ಣಿʼಯಿಂದಲೇ ಕೊನೆಯಾಗುವುದು ವಿಶೇಷ.
ಅದೃಷ್ಟವಶಾತ್ ಕರ್ನಾಟಕ 1972ರಲ್ಲಿ ರಾಜ್ಯ ಪತ್ರಾಗಾರ ಇಲಾಖೆಯನ್ನು ಪ್ರಾರಂಭಿಸಿತು. 1983ನೇ ಇಸವಿಯಲ್ಲಿ ಮೈಸೂರಿನ ಅರಮನೆಯ ಗಾಯಿತ್ರಿ ದೇವಸ್ಥಾನದ ಒಳಗಿರುವ ಕಟ್ಟಡದಲ್ಲಿ ವಿಭಾಗೀಯ ಪತ್ರಾಗಾರ ಇಲಾಖೆ ಬಂದಿತು. ಅದು ಈವಾಗ ಮೈಸೂರಿನ ಜೆ.ಪಿ.ನಗರದಲ್ಲಿ ಸ್ವಂತ ಕಟ್ಟಡದಲ್ಲಿದೆ. ಅಲ್ಲಿ ಇರಿಗೇಷನ್ ರಿಪೋರ್ಟ್, ಪೊಲೀಸ್ ಮ್ಯಾನ್ಯುಯಲ್, ಬೋರ್ಡ್ ಆಫ್ ರೆವಿನ್ಯು ರೆಕರ್ಡ್ಸ್ , ಸೆನ್ಸೆಸ್ ರಿಪೋರ್ಟ್ ಗಳಂತಹ 200 ವರ್ಷದ ದಾಖಲೆಗಳನ್ನು ಜೋಪಾನವಾಗಿ ಇಡಲಾಗಿದೆ. ಇವಾಗಿನ ಕನ್ನಡ ನಾಡಿನ ಅಧಿಕೃತ ಮುಖವಾಣಿ ʼಕರ್ನಾಟಕ ರಾಜ್ಯಪತ್ರʼಕ್ಕೆ ಮೊದಲಿಗೆ ‘ಮೈಸೂರಿನ ಗಜೆಟ್’ ಎಂದು ಹೆಸರಿತ್ತು, ನಂತರ ‘ಗೆಜೆಟ್’ ಆಯಿತು.
ಮೈಸೂರಿಗಾಗಿ ಸೇವೆ ಸಲ್ಲಿಸಿರುವ ಸರ್.ಎಂ. ವಿಶ್ವೇಶ್ವರಯ್ಯನಂತಹ ಹಲವಾರು ಅಧಿಕಾರಿಗಳು ಸಹಿ ಮಾಡಿರುವಂತಹ ಒಂದು ಲಕ್ಷ ಕಡತ(ಫೈಲ್)ಗಳನ್ನು ಟ್ರಂಕುಗಳಲ್ಲಿ ತುಂಬಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರು ಕರ್ನಾಟಕ ಸರ್ಕಾರಕ್ಕೆ ನೀಡಿದ್ದಾರೆ. ಅದೆಲ್ಲವನ್ನೂ ಜೆ ಪಿ ನಗರದ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಜೋಪಾನವಾಗಿ ಇಡಲಾಗಿದೆ.
ಹೀಗೆ ಮೈಸೂರು ಒಡೆಯರು ಜನಸಾಮಾನ್ಯರ ನೋವುಗಳಿಗೆ, ಅವಶ್ಯಕತೆಗಳಿಗೆ ಸ್ಪಂದಿಸಿ, ಆಗಿನ ಕಾಲದಲ್ಲೇ ಮೈಸೂರು, ಜಗತ್ತಿನಾದ್ಯಂತ ಹೆಸರು ಮಾಡುವಂತೆ ಮಾಡಿ, ಮೈಸೂರನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದವರು. ನಿತ್ಯವೂ ಬೆಳಗೆದ್ದು ಮೊದಲಿಗೆ ನೆನೆಯುವಂತಹ ಸ್ಥಾನದಲ್ಲಿರುವ ಮೈಸೂರು ಒಡೆಯರ ಕಥೆ ಸಾಮಾನ್ಯವಾದದ್ದಂತೂ ಅಲ್ಲವೇ ಅಲ್ಲ ಬದಲಿಗೆ ಕರ್ನಾಟಕದ ಹೆಮ್ಮೆ, ಮೈಸೂರಿಗೆ ಕಣ್ಣಿನ ರೆಪ್ಪೆಯ ರೀತಿಯಲ್ಲಿ ಕಾವಲಾಗಿದ್ದು ರಕ್ಷಣೆಯನ್ನಿತ್ತ ಮಹಾನುಭಾವರುಗಳು ನಮ್ಮ ಮೈಸೂರಿನ ಒಡೆಯರು.

BIJAPUR NEWS public public news udaya rashmi Udayarashmi today newspaper udayarashminews.com ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ 22
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 21, 2026

ವಿಶ್ವದಾದ್ಯಂತ ಹರಡಿಕೊಂಡಿರುವ ಬಂಜಾರರು :ಪ್ರೊ.ನಾರಾಯಣ

ಕೋರಿಕೆಗೆ ಮನ್ನಣೆ: ರೈಲ್ವೆ ಸಚಿವರಿಗೆ ಸಚಿವ ಎಂ.ಬಿ.ಪಾಟೀಲ ಧನ್ಯವಾದ

ಬಿ.ಎಲ್.ಡಿ.ಇ ಸಂಸ್ಥೆಯ 94 ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಯ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 21, 2026
    In ದಿನಪತ್ರಿಕೆ
  • ವಿಶ್ವದಾದ್ಯಂತ ಹರಡಿಕೊಂಡಿರುವ ಬಂಜಾರರು :ಪ್ರೊ.ನಾರಾಯಣ
    In (ರಾಜ್ಯ ) ಜಿಲ್ಲೆ
  • ಕೋರಿಕೆಗೆ ಮನ್ನಣೆ: ರೈಲ್ವೆ ಸಚಿವರಿಗೆ ಸಚಿವ ಎಂ.ಬಿ.ಪಾಟೀಲ ಧನ್ಯವಾದ
    In (ರಾಜ್ಯ ) ಜಿಲ್ಲೆ
  • ಬಿ.ಎಲ್.ಡಿ.ಇ ಸಂಸ್ಥೆಯ 94 ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಯ್ಕೆ
    In (ರಾಜ್ಯ ) ಜಿಲ್ಲೆ
  • ನೀಟ್ ಪರೀಕ್ಷೆ: ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿ :ಡಿಸಿ ಆನಂದ್ ಕೆ
    In (ರಾಜ್ಯ ) ಜಿಲ್ಲೆ
  • ಜು.೧ ರಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ಅಭಿಯಾನ
    In (ರಾಜ್ಯ ) ಜಿಲ್ಲೆ
  • ಸಾಂಸ್ಕೃತಿಕ ಸೌರಭ ಕಾರ್ಯಕ್ರಮ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ತಾಯಿ-ಶಿಶು ಮರಣ ಪ್ರಮಾಣ ಶೂನ್ಯಕ್ಕೆ ತನ್ನಿ :ಡಾ.ಆನಂದ ಕೆ
    In (ರಾಜ್ಯ ) ಜಿಲ್ಲೆ
  • ನಭೋಮಂಡಲದಲ್ಲಿ ಸೂರ್ಯನ ಸುತ್ತುವರೆದ ಉಂಗುರಾಕಾರ ವಿಸ್ಮಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.