ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮಿಥುನ ಸುಸಲಾದಿ ಹಾಲಹಳ್ಳಿ ಗ್ರಾಮದ ಯುವಕ. ಗಂಗಾಬಾಯಿ ಮತ್ತು ರಮೇಶ ಸುಸಲಾದಿ ದಂಪತಿಯ ಪುತ್ರ. ಓದಿದ್ದು ಕನ್ನಡ ಮಾಧ್ಯಮದಲ್ಲಿ. ಇತ್ತೀಚೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಎಂ. ಎ. ಇಂಗ್ಲಿಷ್ ವಿಭಾಗಕ್ಕೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾನೆ.
ತಾಯಿಯ ಜೊತೆ ಹೊಲದಲ್ಲಿ ಕೆಲಸ ಮಾಡುತ್ತ ಉಮರಾಣಿಯಲ್ಲಿರುವ ಚಿಂಚೋಳಿ ಕುಟುಂಬದ ಅಜ್ಜ, ಅಜ್ಜಿ ಹಾಗೂ ಮಾವಂದಿರಾದ ಸುಪರ್ದಿ ಮತ್ತು ಗರಡಿಯಲ್ಲಿ ಬೆಳೆದಿದ್ದಾನೆ. ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಭೀಮಾ ತೀರದ ಉಮರಾಣಿ ಸರಕಾರಿ ಶಾಲೆಯಲ್ಲಿಯೇ ಪೂರ್ಣಗೊಳಿಸಿದ ಈ ಪ್ರತಿಭಾವಂತ ವಿದ್ಯಾರ್ಥಿ ಪಿಯುಸಿ ಮತ್ತು ಬಿ. ಎ ಯನ್ನು ಚಡಚಣದ ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾನೆ.
ದಿನಕ್ಕೆ ಸುಮಾರು 8 ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡಿರುವ ಈ ಯುವಕ ಕವಿವಿ ಇಂಗ್ಲಿಷ್ ವಿಭಾಗದ ಸ್ನಾತಕೋತ್ತರ ಪದವಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾನೆ.
ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೇ ಸಾಧನೆ ಮಾಡಲು ಸಾಕಷ್ಟು ಶ್ರಮ ಹಾಕಬೇಕಿರುವ ಇಂದಿನ ದಿನಗಳಲ್ಲಿ ಈತ ಜಗ ಮೆಚ್ಚುವ ಸಾಧನೆ ಮಾಡಿದ್ದಾನೆ. ಅಷ್ಟೇ ಅಲ್ಲ, ಇಂಗ್ಲಿಷ್ ಎಂದರೆ ಗ್ರಾಮೀಣ ಭಾಗದ ಯುವಕರಿಗೆ ಕಬ್ಬಿಣದ ಕಡಲೆಯಲ್ಲ. ಕಠಿಣ ಪರಿಶ್ರಮ ಪಟ್ಟರೆ ಬಾಳೆ ಹಣ್ಣು ಸುಲಿದಷ್ಡೇ ಸಲೀಸಾಗಿ ಓದಬಹುದು ಎಂದು ಸಾಧಿಸಿ ತೋರಿಸಿದ್ದಾನೆ.

