ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ, (ಜಮಖಂಡಿ): ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ 5E ಮಾದರಿಯ ಪಾಠ ಯೋಜನೆ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀರಾಮ್ ಭಟ್ ಮಾತನಾಡಿ, ಹಿಂದೆ ಪಂಚಸೋಪಾನ ಮಾದರಿಯ ಪಾಠ ಯೋಜನೆ ಜಾರಿಯಲ್ಲಿದ್ದು, ಪ್ರಸ್ತುತ 5E ಮಾದರಿಯ ಪಾಠ ಯೋಜನೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಶಿಕ್ಷಕರು ಈ ಮಾದರಿಯನ್ನು ಪರಿಣಾಮಕಾರಿಯಾಗಿ ಪಾಠದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿ ಎಸ್. ಎಚ್. ಲಗಳಿ ಅವರು, 5E ಪಾಠ ಯೋಜನೆಯಲ್ಲಿ ತೊಡಗಿಸುವಿಕೆˌ ಅನ್ವೇಷಣೆ, ವಿವರಣೆˌ ವಿಸ್ತರಣೆ ಹಾಗೂ ಮೌಲ್ಯಮಾಪನ ಎಂಬ ಐದು ಪ್ರಮುಖ ಹಂತಗಳಿದ್ದು, ಶಿಕ್ಷಕರು ಬೋಧನೆಯ ಸಂದರ್ಭದಲ್ಲಿ ಇವುಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಮಹಾಂತೇಶ ಅಂಗಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್. ಎಸ್. ಕಾಗವಾಡೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಶ್ರೇಯಾ ಚೌಹಾಣ್ ಮತ್ತು ಮಧು ಮಠಪತಿ ಪ್ರಾರ್ಥನೆ ನೆರವೇರಿಸಿದರು. ಸೃಷ್ಟಿ ಸಿಂಧೂರ ಅತಿಥಿ ಪರಿಚಯ ಮಾಡಿದರು. ಪ್ರತಿಭಾ ಜಂಬಗಿ ಸ್ವಾಗತಿಸಿ ಪುಷ್ಪಾರ್ಪಣೆ ನೆರವೇರಿಸಿದರು. ರಮಜಾನ ಪಿಂಜಾರ ವಂದನಾರ್ಪಣೆ ಸಲ್ಲಿಸಿದರು. ಪ್ರಸಾದ ಮಾಳಿ ಹಾಗೂ ಮೇಘಾ ಶಿರಗುಪ್ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

