ಅಧಿಕಾರ ಮುಖ್ಯವಲ್ಲ, ಜನರ ಪ್ರೀತಿ ಮತ್ತು ನಿರ್ಧಾರವೇ ನನಗೆ ಶ್ರೇಷ್ಠ’ |ಇಂಡಿಯಲ್ಲಿ ಶಾಸಕರ ಭಾವನಾತ್ಮಕ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: “ನನಗೆ ಅಧಿಕಾರ ಮುಖ್ಯವಲ್ಲ. ನನ್ನ ಜನರ ಪ್ರೀತಿ, ವಿಶ್ವಾಸ ಮತ್ತು ಅವರ ನಿರ್ಧಾರವೇ ಮುಖ್ಯ. ಜನರ ಅಭಿಪ್ರಾಯಕ್ಕೆ ಗೌರವ ನೀಡಿ ನನ್ನ ರಾಜೀನಾಮೆ ನಿರ್ಧಾರವನ್ನು ಹಿಂಪಡೆಯುತ್ತಿದ್ದೇನೆ” ಎಂದು ಇಂಡಿ ಶಾಸಕ ಯಶವಂತರಗೌಡ ಪಾಟೀಲ್ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಇಂಡಿ ತಾಲೂಕಿನ ಜನ ಸಂಪರ್ಕ ಹಾಗೂ ಜನಾಭಿಪ್ರಾಯ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ರಾಜೀನಾಮೆ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಆಲಿಸಿದ ಬಳಿಕ ಈ ಮಹತ್ವದ ಘೋಷಣೆ ಮಾಡಿದರು.
“ನನ್ನ ರಾಜಕೀಯ ಜೀವನದಲ್ಲಿ ಪ್ರತಿಯೊಂದು ಹಂತದಲ್ಲೂ ಜನರು ನನಗೆ ಹೆಗಲಿಗೆ ಹೆಗಲು ನೀಡಿ ಬೆಂಬಲಿಸಿದ್ದಾರೆ. ನನ್ನ ಮೇಲಿನ ನಿಮ್ಮ ವಿಶ್ವಾಸ ಮತ್ತು ಪ್ರೀತಿಯೇ ನನಗೆ ದೊಡ್ಡ ಶಕ್ತಿ. ನಿಮ್ಮ ಆಶಿರ್ವಾದದಿಂದಲೇ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಆದ್ದರಿಂದ ಜನರ ಭಾವನೆಗಳಿಗೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ” ಎಂದು ಹೇಳಿದರು.
ಅವರ ಈ ಘೋಷಣೆಯನ್ನು ಸಭೆಯಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹರ್ಷೋದ್ಗಾರ ಮತ್ತು ಚಪ್ಪಾಳೆಗಳ ಮೂಲಕ ಸ್ವಾಗತಿಸಿದರು.
ಸಭೆಯಲ್ಲಿ ಈರಣ್ಣ ವಾಲಿ, ಇಲಿಯಾಜ್ ಬೋರಾಮಣಿ, ರಾಹುಲ್ ಮಸಳಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಅಜಿತ್ ಧನಶೆಟ್ಟಿ, ಜಾವಿದ್ ಮೊಮಿನ್, ಶಿವಯೋಗೇಪ್ಪ ಚನಗೊಂಡ, ಬಿ.ಸಿ. ಸಾವಕಾರ, ಪ್ರಶಾಂತ್ ಕಾಳೆ, ಸಣ್ಣಪ್ಪ ತಳವಾರ, ರುಕ್ಮದಿನಾ ತದ್ದೇವಾಡಿ, ಸತೀಶ್ ಕುಂಬಾರ, ಜೇಟ್ಟೆಪ್ಪ ರವಳಿ, ಅಣ್ಣಪ್ಪ ತಳವಾರ, ಗಡ್ದೆಪ್ಪ ನಾಟಿಕಾರ ಸೇರಿದಂತೆ ಇಂಡಿ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

