ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಂಶಯಾಸ್ಪದವಾಗಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ನಾಲ್ಕು ಗೋವುಗಳನ್ನು ಗ್ರಾಮಸ್ಥರ ಎಚ್ಚರಿಕೆಯಿಂದ ರಕ್ಷಿಸಿ, ವಾಹನವನ್ನು ವಶಕ್ಕೆ ಪಡೆದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮರಗೂರ ಗ್ರಾಮದಿಂದ ದೇವರನಿಂಬರಗಿ ಗ್ರಾಮದ ಕಡೆಗೆ ಟಂ.ಟಂ. ವಾಹನದಲ್ಲಿ ನಾಲ್ಕು ಗೋವುಗಳನ್ನು ರಾತ್ರಿ ಸುಮಾರು 9 ಗಂಟೆ ವೇಳೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಗ್ರಾಮಸ್ಥರಿಗೆ ವಾಹನದ ಮೇಲೆ ಸಂಶಯ ಮೂಡಿದ್ದು, ವಾಹನವನ್ನು ತಡೆದು ಪರಿಶೀಲಿಸಿದಾಗ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ತಕ್ಷಣ ಗ್ರಾಮಸ್ಥರು ಝಳಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ನಾಲ್ಕು ಗೋವುಗಳು ಹಾಗೂ ಟಂ.ಟಂ. ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವುಗಳ ಸಾಗಣೆ ಕಾನೂನುಬದ್ಧವಾಗಿತ್ತೇ ಅಥವಾ ಅಕ್ರಮವಾಗಿತ್ತೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, “ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ನಾವು ಭಾರತೀಯರು ಹಸುವನ್ನು ಗೋಮಾತೆ ಎಂದು ಪೂಜಿಸಿ ಅದಕ್ಕೆ ತಾಯಿಯ ಸ್ಥಾನ ನೀಡಿದ್ದೇವೆ. ಗೋಹತ್ಯೆಯನ್ನು ಸರಕಾರ ನಿಷೇಧ ಮಾ, ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಕಾನೂನುಗಳಿದ್ದರೂ ಕೆಲವರು ನಿರ್ಭಯವಾಗಿ ಗೋವುಗಳನ್ನು ಸಾಗಿಸುತ್ತಿರುವ ಘಟನೆಗಳು ನಡೆಯುತ್ತಿರುವುದು ಕಳವಳಕಾರಿ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಯಗೊಂಡ (ಮುತ್ತಣ್ಣಗೌಡ) ಬಿರಾದಾರ, ತುಕಾರಾಮ ವಡಗಾಂವ, ಬಾಪುರಾಯ ಬಿರಾದಾರ, ಸೋಮಶೇಖರ ಬಿರಾದಾರ, ಸುನೀಲ ಗೌಡನೂರ, ಬಸಣ್ಣ ನಾಯಕೋಡಿ, ದುಂಡಪ್ಪ ಜೇವೂರ, ಬುಡ್ಡೇಸಾಬ ಶಾಬಾದಿ, ಈರಸಂಗಪ್ಪ ಪಾಟೀಲ, ಶಶಿಕಾಂತ ಬಿರಾದಾರ, ಸೋಮೇಶ ಬಿರಾದಾರ, ಬೀರಪ್ಪ ಪೂಜಾರಿ, ನಿಜಲಿಂಗಪ್ಪ ಬಿರಾದಾರ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಪೊಲೀಸ್ ತನಿಖೆಯ ಬಳಿಕವೇ ಗೋವುಗಳ ಸಾಗಣೆ ಮತ್ತು ಪ್ರಕರಣದ ನಿಖರ ಸ್ವರೂಪ ಸ್ಪಷ್ಟವಾಗಲಿದೆ.

