ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ನಿಡಗುಂದಿ ತಾಲ್ಲೂಕಿನ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತಲಾ ೫ ರಂತೆ ಒಟ್ಟು ೧೫,೦೦೦ ನೋಟ್‌ಬುಕ್ ವಿತರಣೆ ಕಾರ್ಯ ನಡೆಯಲಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರ ಬೆಂಗಳೂರಿನ ಗೆಳೆಯರ ಬಳಗದ ಸಹಕಾರದಿಂದ ಈ ನೋಟ್‌ಬುಕ್‌ಗಳ ವಿತರಣೆ ನಡೆಯಲಿದೆ.
ಈಗಾಗಲೇ ೧೫,೦೦೦ ನೋಟ್‌ಪುಸ್ತಕಗಳು ಬಂದಿದ್ದು, ಇದೇ ಆ.೮ ಶನಿವಾರ ಸಾಂಕೇತಿಕವಾಗಿ ಕೆಲ ಶಾಲೆಗಳಿಗೆ ಚಂದ್ರಶೇಖರ ನುಗ್ಗಲಿ ಅವರೇ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ದಡೆದ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಎಸ್. ಯಳಮೇಲಿ ತಿಳಿಸಿದ್ದಾರೆ.
ಸದ್ಯ ಆಯ್ದ ಶಾಲೆಗಳಿಗೆ ನೋಟ್‌ಬುಕ್ ವಿತರಿಸಲಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿಯೇ ಇನ್ನುಳಿದ ಶಾಲೆಗಳ ವಿದ್ಯಾರ್ಥಿಗಳಿಗೂ ನೋಟ್‌ಬುಕ್ ವಿತರಿಸಲಾಗುತ್ತದೆ. ಶಾಲೆಗಳಿಗೆ ಸಂಘದ ವತಿಯಿಂದಲೇ ಆಯಾ ಶಾಲೆಯ ಹಾಜರಾತಿಗೆ ಅನುಗುಣವಾಗಿ ನೋಟ್‌ಪುಸ್ತಕ ವಿತರಿಸಲಾಗುತ್ತದೆ.
ಮುಂದಿನ ಹಂತದಲ್ಲಿ ನುಗ್ಗಲಿ ಗೆಳೆಯರ ಬಳಗದ ವತಿಯಿಂದ ಶಾಲಾ ಬ್ಯಾಗ್ ಕೂಡ ವಿತರಿಸಲಾಗುವುದು ಎಂದರು.
