ಉದಯರಶ್ಮಿ ದಿನಪತ್ರಿಕೆ
ಸರಗೂರು: ಹೆಚ್ ಡಿ ಕೋಟೆ ತಾಲೂಕಿನ ಜನರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಹುತಾತ್ಮ ಅರ್ಜುನ ಆನೆಯ ನೆನಪಿಗಾಗಿ ಮಾವುತ ಸಿನಿಮಾ ಮಾಡಿದ್ದೇವೆ. ತೆರೆ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡದೆ ಇರುವವರು, ಅರ್ಜುನ ಆನೆಯನ್ನು ಮತ್ತೊಮ್ಮೆ ನೋಡಬೇಕು ಎನ್ನುವವರು ದಯವಿಟ್ಟು ಥಿಯೇಟರ್ ಗೆ ಬಂದು ಸಿನಿಮಾ ನೋಡಿ, ರೈತನ ಮಗನಿಗೆ ಆಶೀರ್ವಾದ ಮಾಡಿ ಬೆಳೆಸಬೇಕೆಂದು ನಟ ಲಕ್ಷ್ಮೀಪತಿ ಬಾಲಾಜಿ ಮನವಿ ಮಾಡಿದರು.
ಚಿತ್ರತಂಡದ ಜೊತೆ ಸರಗೂರು ಪಟ್ಟಣದ ಶಂಕರ್ ಥಿಯೇಟರ್ ಗೆ ಆಗಮಿಸಿ ನಟ ಲಕ್ಷ್ಮೀಪತಿ ಬಾಲಾಜಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದರು.
ಅಭಿಮಾನಿಗಳ ಪ್ರೀತಿ, ವಿಶ್ವಾಸ ಕಂಡು ಭಾವುಕರಾದರು.
ಈ ವೇಳೆ ಮಾತನಾಡಿದ ಲಕ್ಷ್ಮೀಪತಿ ಬಾಲಾಜಿ, ಸರಗೂರಿನಲ್ಲಿ ಹೌಸ್ ಫುಲ್ ಆಗಿರೋದು ತುಂಬಾ ಖುಷಿಯಾಗಿದೆ. ಅರ್ಜುನನ್ನು ಮತ್ತೆ ತೆರೆ ಮೇಲೆ ತರಲು ಬಹಳ ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಕಾಡಿನ ಸಂರಕ್ಷಣೆ ಮಾತ್ರವಲ್ಲ. ಸಿನಿಮಾದಲ್ಲಿ ಕೊನೆವರೆಗೂ ಸಸ್ಪೆನ್ಸ್ ಕಾಪಾಡಿಕೊಂಡು ಬಂದಿದ್ದೇವೆ. ಕ್ಯೂಟ್ ಲವ್ ಸ್ಟೋರಿ ಇದೆ. ಥ್ರಿಲ್ಲರ್ ಮಂಜು ಕೂಡ ಅಭಿನಯಿಸಿದ್ದು, ಸಾಹಸಮಯ ದೃಶ್ಯಗಳಿವೆ. ದೂರದೂರುಗಳಿಂದ ರೈತರೇ ಸಿನಿಮಾ ನೋಡಲು ಬಂದಿದ್ದು ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಪ್ರತಿಯೊಬ್ಬರೂ ಮಾವುತ ಸಿನಿಮಾ ನೋಡುವ ಮೂಲಕ ರೈತನ ಮಗನಾದ ನನ್ನನ್ನ ಪ್ರೋತ್ಸಾಹಿಸಿ, ಬೆಳೆಸಬೇಕೆಂದು ಮನವಿ ಮಾಡಿದರು.
ನಟಿ ಮಹಾಲಕ್ಷ್ಮಿ ಮಾತನಾಡಿ, ಮೊದಲ ಬಾರಿಗೆ ಸರಗೂರಿಗೆ ಬಂದಿದ್ದೇನೆ. ಇಲ್ಲಿನ ಜನರ ಅಭಿಮಾನ, ಪ್ರೀತಿ ಕಂಡು ಬಹಳ ಸಂತೋಷವಾಯಿತು. ಇದು ನನ್ನ ಏಳನೇ ಸಿನಿಮಾ. ಈ ಚಿತ್ರದಲ್ಲಿ ನಾನು ಆದಿವಾಸಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಹಾಗೂ ನಟ ಲಕ್ಷ್ಮೀಪತಿ ಬಾಲಾಜಿ ನಡುವಿನ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಒಂದು ಸಂದೇಶವುಳ್ಳ ಚಿತ್ರದ ಜೊತೆಗೆ ಫ್ಯಾಮಿಲಿ ಸಮೇತ ಕುಳಿತುನೋಡುವ ಸಿನಿಮಾ ಎಂದು ಹೇಳಿದರು.
ಖಳನಟ ಕೈಲಾಶ್ ಕುಟ್ಟಪ್ಪ ಮಾತನಾಡಿ, ಸಿನಿಮಾ ನೋಡುವಾಗ ಜನರು ಸಿಳ್ಳೆ ಹೊಡೆಯುವುದನ್ನು ನೋಡಿದ್ದಾಗ, ಶೂಟಿಂಗ್ ಮಾಡುವಾಗ ಕಾಡಿನಲ್ಲಿ ಕಷ್ಟಪಟ್ಟಿದ್ದು ಮರೆತುಹೋಗುತ್ತೆ. ಸಿನಿಮಾ ನೋಡಿ ನನ್ನ ಗುರುತಿಸಿರುವುದಕ್ಕೆ ಬಹಳ ಸಂತೋಷವಾಗುತ್ತೆ ಎಂದರು.
*ನಟ ಲಕ್ಷ್ಮೀಪತಿ ಬಾಲಾಜಿ ಅವರು ಒಂದು ವಿನೂತನ ಪ್ರಯೋಗ, ಸಾಹಸಕ್ಕೆ ಕೈಹಾಕಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಕಾಡಿನ ಸಂರಕ್ಷಣೆ ಜೊತೆಗೆ ಕಾಡುಪ್ರಾಣಿ -ಮಾನವ ಸಂಘರ್ಷ ವಿಚಾರಧಾರೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಒಬ್ಬ ರೈತನ ಮಗ ಮನಸ್ಸು ಮಾಡಿದರೆ ಯಾವ ಕ್ಷೇತ್ರದಲ್ಲೂ ಯಶಸ್ವಿಯಾಗಬಹುದು ಎಂಬುದನ್ನು ಮತ್ತೆ ಲಕ್ಷ್ಮೀಪತಿ ಬಾಲಾಜಿ ಸಿನಿಮಾ ಕ್ಷೇತ್ರದಲ್ಲಿ ತೋರಿಸಿದ್ದಾರೆ.”
– ಭೂಮಿಪುತ್ರ ಚಂದನ್ ಗೌಡ
ರೈತ ಕಲ್ಯಾಣ ಸಂಘ, ಸಂಸ್ಥಾಪಕರು

