ಶಾಲೆಗೆ ಅಧಿಕಾರಿಗಳ ಭೇಟಿ | ಪರಿಶೀಲನೆ ಮಾಡಿ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯಲಾಗುತ್ತಿದೆ ಎಂಬ ಆರೋಪದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸದರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಮಕ್ಕಳ ಊಟದ ತಟ್ಟೆಗಳನ್ನು ಕೊಳಚೆ ನೀರಿನಿಂದ ತೊಳೆಯಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಕೊಳಚೆ ನೀರಿನ ಬದಲಾಗಿ, ಫಿಲ್ಟರ್ ಯಂತ್ರದಿಂದ ಹೊರಹೋಗುವ ತ್ಯಾಜ್ಯ ನೀರನ್ನು ಪ್ರತ್ಯೇಕ ಪೈಪ್ ಮುಖಾಂತರ ತರಲಾಗಿದ್ದು, ಅದೇ ನೀರನ್ನು ತಟ್ಟೆ ತೊಳೆಯಲು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಆವರಣದಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಶಾಲೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ಕುಡಿವ ನೀರಿನ ವ್ಯವಸ್ಥೆಯೂ ಲಭ್ಯವಿದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ.
“ಈ ಸಂಬಂಧ ಸದರಿ ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಮುಖ್ಯ ಶಿಕ್ಷಕರು ನೀಡುವ ಉತ್ತರ ಹಾಗೂ ಸ್ಥಳ ಪರಿಶೀಲನಾ ವರದಿ ಸಮೇತ ವಿಷಯವನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
– ಎ.ಕೆ.ಬಸವಣ್ಣವರ
ಜಮಖಂಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು

