ಭ್ರಷ್ಟಾಚಾರದ ಕೂಪವಾಗಿದ್ದ ಮನರೆಗಾ ಗೆ ಮುಕ್ತಿ | ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುಪಿಎ ಆಡಳಿತಾವಧಿಯ ಮನರೆಗಾ ಯೋಜನೆಯು ಭ್ರಷ್ಟಾಚಾರ, ಅಸಮರ್ಪಕ ಅನುಷ್ಠಾನ ಮತ್ತು ಸುಳ್ಳು ಆಸ್ತಿ ಸೃಷ್ಟಿಯ ಕೇಂದ್ರವಾಗಿತ್ತು. ಈ ವೈಫಲ್ಯಗಳನ್ನು ಸರಿಪಡಿಸಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎನ್ಡಿಎ ಸರ್ಕಾರವು ಕ್ರಾಂತಿಕಾರಿ ‘ವಿಬಿ-ಜಿ ರಾಮ್ ಜಿ’ (VB-G RAM G Act, 2025) ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಅವರು ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಆಯೋಜಿಸಲಾಗಿದ್ದ ‘ವಿಬಿ-ಜಿ ರಾಮ್ ಜಿ’ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಯುಪಿಎ vs ಎನ್ಡಿಎ ಹೋಲಿಕೆ: “ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ಶೇ. 17.6 ರಷ್ಟು ವೈಯಕ್ತಿಕ ಆಸ್ತಿ ಸೃಷ್ಟಿಯಾಗಿದ್ದರೆ, ಎನ್ಡಿಎ ಅವಧಿಯಲ್ಲಿ ಇದು ಶೇ. 62.95 ಕ್ಕೆ ಏರಿಕೆಯಾಗಿದೆ. ಹಳೆಯ ಯೋಜನೆಯಲ್ಲಿ 290 ಕೋಟಿ ರೂ.ಗೂ ಹೆಚ್ಚು ಅಕ್ರಮಗಳು ಪತ್ತೆಯಾಗಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 6.44 ಕೋಟಿಗೂ ಹೆಚ್ಚು ಆಸ್ತಿಗಳನ್ನು ಜಿಯೋ-ಟ್ಯಾಗ್ ಮಾಡುವ ಮೂಲಕ ಪಾರದರ್ಶಕತೆ ತಂದಿದೆ,” ಎಂದು ಕಡಾಡಿ ಅವರು ವಿವರಿಸಿದರು. ಹೊಸ ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಬಿತ್ತನೆ ಮತ್ತು ಕಟಾವು (Peak Season) ಸಂದರ್ಭದಲ್ಲಿ ರೈತರಿಗೆ ಕೃಷಿ ಕಾರ್ಮಿಕರ ಕೊರತೆಯಾಗದಂತೆ, ಯೋಜನೆಯ ಕೆಲಸಗಳನ್ನು 60 ದಿನಗಳ ಕಾಲ ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ನಕಲಿ ಉದ್ಯೋಗ ಸೃಷ್ಟಿ ತಡೆಯಲು ಬಯೋಮೆಟ್ರಿಕ್ ಹಾಜರಾತಿ ಮತ್ತು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ವಿವರಿಸಿದರು.
ಚಂದ್ರಶೇಖರ ಕವಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಾಜಪಾ ಜಿಲ್ಲಾಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ಅವರು ಮಾತನಾಡಿ, “ಯುಪಿಎ ಅವಧಿಯಲ್ಲಿ ಪಶ್ಚಿಮ ಬಂಗಾಳ, ಒಡಿಶಾದಂತಹ ರಾಜ್ಯಗಳಲ್ಲಿ ಸತ್ತವರ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿತ್ತು. ‘ವಿಬಿ-ಜಿ ರಾಮ್ ಜಿ’ ಯೋಜನೆಯು ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಗ್ರಾಮ ಪಂಚಾಯತ್ಗಳನ್ನು ‘ವಿಕಸಿತ’ ಕೇಂದ್ರಗಳನ್ನಾಗಿ ಮಾಡಲಿದೆ,” ಎಂದರು.
ಕಾರ್ಯಕ್ರಮದ ಆರಂಭದಲ್ಲಿ, ಇಂದು ನಿಧನರಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿ.ಪ ಸದಸ್ಯ ಅರುಣ ಶಹಾಪೂರ, ಪಕ್ಷದ ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಪಾಟೀಲ, ಸಂಜೀವ ಐಹೊಳೆ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಸಾಬು ಮಾಶ್ಯಾಳ, ಸ್ವಪ್ನಾ ಕಣಮುಚನಾಳ, ರವಿಕಾಂತ ವಗ್ಗೆ, ಸುರೇಶ ಬಿರಾದಾರ ಹಾಗೂ ಬಾಲರಾಜ ರೆಡ್ಡಿ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಈರಣ್ಣ ರಾವೂರ ಸ್ವಾಗತಿಸಿದರು. ಮಳುಗೌಡ ಪಾಟೀಲ ಅವರು ನಿರೂಪಿಸಿದರು. ಸಾಬು ಮಾಸ್ಯಾಳ ವಂದಿಸಿದರು.

