ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ ಐದು ವರ್ಷಗಳಕಾಲ ನಡೆದ ಸಿಹಿ ಕಹಿ ಘಟಣೆಗಳನ್ನು ಗ್ರಾಮ ಪಂಚಾಯತಿ ಸದಸ್ಯರು ಅವಧಿಯ ಕೊಣೆಯ ಸಾಮಾನ್ಯ ಸಭೆಯಲ್ಲಿ ನೆನಪು ಮಾಡಿಕೊಂಡು ಪುಳಕಿತರಾದರು.
ಗುರುವಾರ ಸ್ಥಳಿಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯ ಗುರಲಿಂಗಪ್ಪ ಪೂಜಾರಿ ಮಾತನಾಡಿ ಗ್ರಾಮದ ಅಭಿವೃದ್ದಿಯಲ್ಲಿ ಪಕ್ಷಬೇಧ ಮರೆತು ಎಲ್ಲ ಸದಸ್ಯರು ನೀಡಿದ ಸಹಕಾರವನ್ನು ನೆನೆದರು,
ಸದಸ್ಯ ಆನಂದ ಕವಟಿ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಮಾತನಾಡಿ ಪರರ ಪಾಲಾಗಿದ್ದ ಗ್ರಾಮದ ೨೦ ಎಕರೆ ಸರಕಾರಿ ಗೋಮಾಳ ಜಾಗೆಯನ್ನು ಮರಳಿ ಪಡೆಯಲು ಗ್ರಾಮದ ಪ್ರತಿಯೊಬ್ಬರು ಶ್ರಮ ವಹಿಸಿದ್ದು ಹಾಗೂ ಗ್ರಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಂದು ತಿಂಗಳ ಕಾಲ ಬಯಲು ಶೌಚ ಮುಕ್ತಗೊಳಿಸಲು ಶ್ರಮಿಸಿದ ಘಟಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸದಸ್ಯರಾದ ಕೇಶವ ವಂದಾಲ, ಶ್ರೀಮತಿ ಮೇಘಾ ಗಾಣಿಗೇರ, ಶ್ರೀಮತಿ ಪರವ್ವ ಮಲ್ಲಯ್ಯ ಮಠಪತಿ ಮಾತನಾಡಿ ಐದು ವರ್ಷಗಳ ಅವಧಿಯಲ್ಲಿಯೂ ತಮ್ಮ ವಾರ್ಡಿನಲ್ಲಿ ಹಲವು ಕಾಮಗಾರಿಗಳು ಕೈಗೊಳ್ಳಲು ಸಾಧ್ಯವಾಗದಕ್ಕೆ ಬೇಸರ ವ್ಯಕ್ತಪಡಿಸಿದರು.
ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ರಮೇಶ ಮೇತ್ರಿ, ಚನ್ನಪ್ಪ ಪೂಜಾರಿ, ಕಾರ್ಯದರ್ಶೀ ರಘು ಬಜಂತ್ರಿ, ಸಹಾಯಕ ಎನ್.ಐ. ಮಠಪತಿ ಮಾತನಾಡಿದರು.
ಪ್ರಸಕ್ತ ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿರುವುದರಿಂದ ಸರಕಾರ ಜ.೩೦ರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕಗೊಳಿಸಲು ಸಂಬಂದಿಸಿದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ, ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟವೂ ಪ್ರಸಕ್ತ ಗ್ರಾ.ಪಂ. ಚುನಾವಣೆ ಮುಗಿಯುವ ವರೆಗೆ ಹಾಲಿ ಸದಸ್ಯರನ್ನು ಅಧಿಕಾರದಲ್ಲಿ ಮುಂದುವರಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದು ಸರಕಾರ ಯಾವ ತೀರ್ಮಾಣ ಕೈಗೊಳ್ಳುವುದೋ ಕಾದು ನೋಡಬೇಕಾಗಿದೆ.

