ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನಕೊಡದೆ ಮಧುಮೇಹ, ರಕ್ತದೊತ್ತಡ ಮುಂತಾದವು ಆರೋಗ್ಯದ ಮೇಲೆ ಇಂದು ದುಷ್ಪರಿಣಾಮ ಬೀರುತ್ತಿರುವುದು ಸಾಮಾನ್ಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ನಗರದ ದರಬಾರ ಸಂಸ್ಥೆಯ ಉಪಾಧ್ಯಕ್ಷ ಕೆ.ಜಿ.ದೇಶಪಾಂಡೆ ಹೇಳಿದರು.
ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಹಾಗಾಗದೆ ಮಕ್ಕಳಿಗೆ ದೈಹಿಕ ಶಿಕ್ಷಕರು ಪ್ರತಿನಿತ್ಯ ವ್ಯಾಯಾಮ, ಯೋಗ, ಕಬಡ್ಡಿ, ಖೋ-ಖೋ ಮುಂತಾದ ಕ್ರೀಡೆಯನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕ ವಾತಾವರಣ ಶಾಲೆಯಲ್ಲಿ ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು, ಮೊಬೈಲ್ ಸಾಮಾಜಿಕ ಜಾಲತಾಣಗಳಿಂದ ದೂರವಿರುವಂತೆ ಶಿಕ್ಷಕರು, ಪಾಲಕರು ಹಾಗೂ ಮಕ್ಕಳ ಭವಿಷ್ಯತ್ತಿಗಾಗಿ ತಮ್ಮ ಜವಾಬ್ದಾರಿ ಮೆರೆಯಬೇಕಾಗಿದೆ ಎಂದರಲ್ಲದೆ ಮನಸ್ಸಿನ ಏಕಾಗ್ರತೆಗೆ ಒಳ್ಳೆ ಪುಸ್ತಕ ಓದುವುದು, ಸತ್ಸಂಗದ ಸುವಿಚಾರ ಮತ್ತು ದಾರ್ಶನಿಕರ ತತ್ವ ಜ್ಞಾನ ಸುಭಾಷಿತಗಳನ್ನು ಮಕ್ಕಳೊಂದಿಗೆ ವಿನಿಮಯ ಮಾಡಿಕೊಂಡು ಸೈದ್ಧಾಂತಿಕ ಚಿಂತನೆಗಳನ್ನು ಮಕ್ಕಳಿಗೆ ಅರ್ಥೈಸುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಸಿದ್ಧಗೊಳಿಸುವುದರಿಂದ ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ, ಸಂಸ್ಕಾರಗಳನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ ಎಂದು ನುಡಿದರು.
ವೇದಿಕೆ ಮೇಲೆ ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ, ಪ್ರಧಾನ ಗುರುಮಾತೆ ಶ್ರೀಮತಿ ರೂಪಾ ತೋಳ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

