ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲ್ಹಾರ ನಾಕಾ ಬಳಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಭಾರಿ ಪ್ರಮಾಣದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಾಚರಣೆಯಲ್ಲಿ ಸುಮಾರು ₹1,02,79,560 ಮೌಲ್ಯದ ಮದ್ಯ, ಲಾರಿ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ತಮ್ಮ ನಿರ್ದೇಶನದಂತೆ ಅಕ್ರಮ ಮದ್ಯ ಮಾರಾಟ, ತಯಾರಿಕೆ ಹಾಗೂ ಸಾಗಾಟದ ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದ್ದು, ಮಂಗಳವಾರ ಮುಂಜಾನೆ ಡಿಎಸ್ಪಿ ನಾಗರಾಜ್ ಜೆ. ಅವರು ರಾತ್ರಿ ಪೆಟ್ರೋಲಿಂಗ್ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದರು ಎಂದು ತಿಳಿಸಿದರು.
ಪೊಲೀಸರು ಪರಿಶೀಲನೆ ನಡೆಸಿದಾಗ MH-09-CA-3662 ಸಂಖ್ಯೆಯ ಲಾರಿಯಲ್ಲಿ ತಾಡಪತ್ರಿ ಹಾಗೂ ಎರೆಹುಳು ಗೊಬ್ಬರದ ಚೀಲಗಳ ಕೆಳಗೆ ಮದ್ಯದ ಪೆಟ್ಟಿಗೆಗಳನ್ನು ಅಡಗಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.
ಆರೋಪಿತರು ಗೋವಾದ ಪಣಜಿಯಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32, 34 ಹಾಗೂ 38(A) ಅಡಿಯಲ್ಲಿ ಪ್ರಕರಣ ದಾಖಲಿಸಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು
- ಶ್ರೀನಿವಾಸ ಕಾಸಪ್ಪ ಮೀಸಿ (25), ಗದಗ ಜಿಲ್ಲೆ
- ಹುಸೇನ್ಸಾಬ್ ರುಕ್ಮುದ್ದೀನ ಮುಲ್ಲಾ (35), ವಿಜಯಪುರ
- ಸಿದ್ದರಾಮ್ ಕಾಶೀನಾಥ ಡಾಲೆ (24), ಸೋಲಾಪುರ
- ಬಸವರಾಜ್ ಸತ್ಯೆಪ್ಪ ಭಜಂತ್ರಿ (31), ವಿಜಯಪುರ

