ಲೇಖನ
– ಸಂತೋಷ್ ರಾವ್ ಪೆರ್ಮುಡ,
ಪರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-574198
ದೂ: 9742884160
ಉದಯರಶ್ಮಿ ದಿನಪತ್ರಿಕೆ
ಯೋಗವು ಪ್ರಾಚೀನ ಭಾರತೀಯ ಅಭ್ಯಾಸವಾಗಿದ್ದು, ಇದು ದೈಹಿಕ ಭಂಗಿಗಳು (ಆಸನಗಳು), ಉಸಿರಾಟದ ತಂತ್ರಗಳು (ಪ್ರಾಣಾಯಾಮ) ಮತ್ತು ಧ್ಯಾನದ ಮೂಲಕ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಕಾಪಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ನಮ್ಯತೆಯನ್ನು ಹೆಚ್ಚಿಸಲು ಮತ್ತು ಒಟ್ಟು ಆರೋಗ್ಯವನ್ನು ಸುಧಾರಿಸುವ ಪರಿಣಾಮಕಾರಿ ಮಾರ್ಗವಾಗಿದೆ.
ಯೋಗ ಮಾಡಿದರೆ ಆರೋಗ್ಯವಂತರಾಗಿ ಇರಬಹುದು ಎನ್ನುವ ಮಾತಿದೆ. ಮಾನವ ಜೀವನದ ಪರಿಪೂರ್ಣ ವಿಕಾಸವುಂಟಾಗಲು ಯೋಗವು ಅನಿವಾರ್ಯ. ಆದಿಕಾಲದಿಂದಲೇ ಯೋಗದ ಬಳಕೆ ಇತ್ತೆಂಬುದು ಸಾಕ್ಷಗಳಿಂದ ತಿಳಿಯುತ್ತದೆ. ’ಯೋಗವು ಭಾರತೀಯರಿಗೆ ಪರಂಪರಾಗತವಾಗಿ ಹಿರಿಯರಿಂದ ಬಂದ ಉಡುಗೊರೆ’. ಆದ್ದರಿಂದ ಮೊದಲು ಯೋಗ ಎಂದರೇನು, ಹೇಗೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕು. ಗಾಂಧೀಜಿಯ ಮಾತಿನಂತೆ ‘ಶರೀರದ, ಮನಸ್ಸಿನ, ಆತ್ಮದ ಸರ್ವಶಕ್ತಿಗಳನ್ನೂ ಭಗವಂತನ ಜೊತೆಗೆ ಸಂಯೋಜನೆ ಮಾಡುವುದೇ ಯೋಗ’.

ದೇಹ ಮತ್ತು ಮನಸ್ಸು, ಮನಸ್ಸು ಮತ್ತು ಚೈತನ್ಯಗಳನ್ನು ಕೂಡಿಸುವುದು ಆಥವಾ ಬಂಧಿಸುವುದು ಅಥವಾ ನೊಗಕ್ಕೆ ಕಟ್ಟುವುದೇ ಯೋಗದ ಉದ್ದೇಶ. ಅರಿಷಡ್ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವೈರಿಗಳು ಹೆಚ್ಚಾಗದೇ ಯೋಗ್ಯ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಈ ಆರು ಅಂಶಗಳು ಅಂದರೆ ಎಲ್ಲವೂ ತನ್ನದಾಗಬೇಕೆಂಬ ಕಾಮ(ಆಸೆ), ಸಿಡುಕೆಂಬ(ಕ್ರೋಧ), ಇತರ ವಿಚಾರಗಳ ಬಗೆಗಿನ ನಿರೀಕ್ಷೆ(ಮೋಹ), ನಾನೇ ಹೆಚ್ಚೆಂಬ(ಮದ), ಇತರರ ಏಳಿಗೆಯನ್ನು ಸಹಿಸದ(ಮತ್ಸರ), ಇವುಗಳ ಈಡೇರಿಕೆಗಾಗಿ ವಂಚನೆ(ಲೋಭ) ಪ್ರಾಪಂಚಿಕವಾಗಿ ಹೆಚ್ಚಿದೆ. ಇವನ್ನು ಗೆಲ್ಲಲು ವ್ಯಕ್ತಿಗತವಾಗಿ ‘ಈ ಆರೂ ಯೋಗ್ಯ ರೀತಿಯಲ್ಲಿ ನಿಯಂತ್ರಣದಲ್ಲಿ ಇರಬೇಕು’. ಇದರಿಂದ ಜಾಗತಿಕ ‘ಆರೋಗ್ಯಯುತ ವಿಶ್ವ’ ನಿರ್ಮಾಣ ಸಾಧ್ಯ.
ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತೇವೆ. ಭಾರತದ ಪ್ರಸ್ತಾಪದಂತೆ ಮೇರೆಗೆ ವಿಶ್ವಸಂಸ್ಥೆ ಇದನ್ನು ಜಾರಿಗೆ ತಂದಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅಗತ್ಯ. ಇದಕ್ಕೇ ಯೋಗ ಮಾಡಿ! ನಿರೋಗಿಯಾಗಿ!!! ಎಂದು ಹೇಳಿರುವುದು. ಈ ದಿನ ಜಗತ್ತಿನಾದ್ಯಂತ ಲಕ್ಷಾಂತರ ಜನರು ಸಾಮೂಹಿಕ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಾರೆ. ಯೋಗದಿಂದ ದೇಹವು ಸದೃಢವಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒತ್ತಡ, ಆತಂಕವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಿತ್ಯದ ಯೋಗಾಭ್ಯಾಸವು ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ತುಂಬಾ ಸಹಕಾರಿ.


