ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಸನ್ಮಾನ | ಅತೀ ಹೆಚ್ಚು ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದ ಅಕಾಡೆಮಿ ವಿದ್ಯಾರ್ಥಿಗಳು
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಶಿಯೇಷನ್ ವತಿಯಿಂದ ವಿಜಯಪುರದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಪಡೆದುಕೊಂಡ ಮುದ್ದೇಬಿಹಾಳ ತಾಲೂಕಿನ ಏಕಲವ್ಯ ರರ‍್ಸ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಅಕಾಡೆಮಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಿ, ಸಮಾಜ ಸೇವಕ, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಮಕ್ಕಳನ್ನು ವಿನೂತನವಾದ ಕ್ರೀಡೆಗಳಲ್ಲಿ ಭಾಗಿಯಾಗಿಸುವಲ್ಲಿ ಏಕಲವ್ಯ ರರ‍್ಸ್ ಸ್ಕೇಟಿಂಗ್ ಅಕಾಡೆಮಿ ಪರಿಶ್ರಮ ಸಾಕಷ್ಟಿದೆ. ಹಿಂದೆ ಕೇವಲ ಕ್ರಿಕೇಟ್, ಕಬ್ಬಡ್ಡಿ ಹಾಗೂ ಕರಾಟೆ ಕ್ರೀಡೆಗಳಲ್ಲಿ ನಮ್ಮ ಮಕ್ಕಳು ಭಾಗಿಯಾಗುವುದನ್ನು ನೋಡುತ್ತಿದ್ದೇವು. ಆದರೆ ಏಕಲವ್ಯ ರರ‍್ಸ್ ಸ್ಕೇಟಿಂಗ್ ಅಕಾಡೆಮಿವತಿಯಿಂದ ನಮ್ಮ ಮಕ್ಕಳಿಗೆ ಸ್ಕೇಟಿಂಗ್ ಹಾಗೂ ಏರ್‌ಗನ್ ಕ್ರೀಡೆಯಲ್ಲಿ ಭಾಗಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಅಕಾಡೆಮಿಯನ್ನು ರಚಿಸಿರುವ ಶಿವುಕುಮಾರ ಶಾರದಳ್ಳಿ ಅವರ ಸಾಧನೆ ಅಮೋಘವಾದದ್ದು ಎಂದರು.
ಚಿಂತಕ ಅರವಿಂದ ಕೊಪ್ಪ ಮಾತನಾಡಿ, ಈ ಭಾಗದ ಮಕ್ಕಳಿಗೆ ಹೊಸ ಕಲ್ಪನೆಯೊಂದಿಗೆ, ಅಲ್ಪಮಟ್ಟದ ಸೌಲಭ್ಯದಲ್ಲಿಯೇ ಸ್ಕೇಟಿಂಗ್ ಟ್ರೇನಿಂಗ್ ನೀಡುವಂತಹ ಕಾರ್ಯ ಏಕಲವ್ಯ ರರ‍್ಸ್ ಸ್ಕೇಟಿಂಗ್ ಅಕಾಡೆಮಿ ನಡೆಸುತ್ತಿದೆ. ಇಂತಹ ಅಕಾಡೆಮಿಗೆ ಸ್ಥಳೀಯ ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಸೌಲಭ್ಯವನ್ನು ದೊರಕಿಸಿಕೊಟ್ಟರೆ ತಾಲೂಕಿನ ಪ್ರತಿಭೆಗಳನ್ನು ಹೊರ ರಾಜ್ಯ ಹಾಗೂ ದೇಶಗಳಲ್ಲಿ ಪ್ರಸಿದ್ಧಿ ಪಡಿಸುವ ವಿಶ್ವಾಸ ನಮಗಿದೆ ಎಂದರು.
ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೇಸ್ ಎಸ್.ಸಿ ಮೋರ್ಚಾಧ್ಯಕ್ಷ ಶ್ರೀಕಾಂತ ಚಲವಾದಿ, ಮಹಾಂತೇಶ ಬೂದಿಹಾಳಮಠ, ಎಂ.ಆರ್.ಪಾಟೀಲ ವಕೀಲರು ಸೇರಿದಂತೆ ಕ್ರೀಡಾಪಟುಗಳ ಪಾಲಕರು ಇದ್ದರು.
ಸ್ಕೇಟಿಂಗ್ ಕ್ರೀಡಾ ವಿಜೇತರಿಗೆ ಸನ್ಮಾನ
ತಾಲೂಕಿನ ಬಿಎಎಸ್ ಅಂತರಾಷ್ಟ್ರೀಯ ಶಾಲೆಯ ೧೦ ವಿದ್ಯಾರ್ಥಿಗಳಿಗೆ, ಎಂ.ಆರ್.ಇ.ಎಂ ಶಾಲೆಯ ೯ ವಿದ್ಯಾರ್ಥಿಗಳಿಗೆ, ಮುದ್ದೇಬಿಹಾಳ ಆಕ್ಸ್ಫರ್ಡ ಪಾಟೀಲ ಶಾಲೆಯ ೩ ವಿದ್ಯಾರ್ಥಿಗಳಿಗೆ, ಪ್ರಾರ್ಥನಾ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ, ನ್ಯೂ ಬ್ರಿಲಿಯಂಟ್ ಶಾಲೆ, ಬಿ.ಎಸ್. ಸೆಂಟ್ರಲ್ ಸ್ಕೂಲ್, ಚಿನ್ಮಯ ಜೆ.ಸಿ. ಶಾಲೆ, ಸಂತ ಕನಕದಾಸ ಶಾಲೆಯ ಹಾಗೂ ಆಕ್ಸ್ಫರ್ಡ ನಾಗರಬೆಟ್ಟ ಶಾಲೆಯ ತಲಾ ಓರ್ವ ಕ್ರೀಡಾವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
“ಈಗಾಗಲೇ ಏಕಲವ್ಯ ರರ‍್ಸ್ ಸ್ಕೇಟಿಂಗ್ ಅಕಾಡೆಮಿ ಮುಖ್ಯಸ್ಥ ಶಿವು ಶಾರದಳ್ಳಿ ಅವರಿಗೆ ಸ್ಥಳೀಯ ಪುರಸಭೆಗೆ ತಮ್ಮ ಅಕಾಡೆಮಿವತಿಯಿಂದ ಅಗತ್ಯವಿರುವ ಮೈದಾನ ಮಂಜೂರಾತಿಗೆ ಮನವಿ ಸಲ್ಲಿಸಲು ತಿಳಿಸಿದ್ದೇನೆ. ಅದನ್ನು ಕೂಡಲೇ ಸ್ಥಳೀಯ ಜನಪ್ರತಿನಿಧಗಳ ಗಮನಕ್ಕೆತಂದು ಅಕಾಡೆಮಿಗೆ ಬೇಕಾದ ಮೈದಾನದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು.”
– ಗುರು ತಾರನಾಳ
ಅಧ್ಯಕ್ಷರು, ತಾಲೂಕಾ ಬ್ಲಾಕ್ ಕಾಂಗ್ರೇಸ್, ಮುದ್ದೇಬಿಹಾಳ

