ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಬೆಂಗಳೂರು ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ, (ಟೆಕ್ಸಾಕ್) ಬೆಂಗಳೂರ ಇವರ ಸಹಯೋಗದಲ್ಲಿ ಎಂ.ಎಸ್. ಎಂ.ಇ. ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ರ್ಯಾಂಪ್) ಯೋಜನೆಯಡಿಯಲ್ಲಿ ಟ್ರೆಡ್ಸ್ ಯೋಜನೆಯ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಇತ್ತಿಚಿಗೆ ನಗರದ ಹೋಟೆಲ್ ಮಧುವನ ಇಂಟರ್ ನ್ಯಾಷನಲ್, ನಡೆಯಿತು.
ಜಿಲ್ಲಾ ಅಗ್ರಣೀಯ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ, ಸಿದ್ದಯ್ಯ ಬಿ. ಇವರು ಮಾತನಾಡಿ, ಎಂ.ಎಸ್.ಎಂ.ಇ. ಗಳಿಗೆ ಬ್ಯಾಂಕಿನಿಂದ ದೊರೆಯುವ ಯೋಜನೆಗಳ ಮತ್ತು ಬ್ಯಾಂಕ ಮೂಲಕ ಸಾಲ ಪಡೆಯುವಲ್ಲಿ ಸಮಸ್ಯೆಗಳು ಎದುರಾದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ವಿಜಯಪುರದ ಎಸ್.ಎಂ.ಇ. ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಶ್ರೀಶೈಲಯ್ಯ ಹೆಚ್. ಗಲಗಲಿ ಇವರು ಮಾತನಾಡಿ, ಟ್ರೆಡ್ಸ್ ಯೋಜನೆಯಲ್ಲಿ ಎಂ.ಎಸ್.ಎಂ.ಇ ಯವರಿಗೆ ಬರಬೇಕಾದ ಪಾವತಿಗಳನ್ನು ಹಣಕಾಸು ಸಂಸ್ಥೆಗಳ ಮೂಲಕ ತ್ವರಿತವಾಗಿ ನಗದು ಪಡೆಯಲು ಅನುಕೂಲವಾಗುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಇದು ಪಾವತಿ ವಿಳಂಬವನ್ನು ಕಡಿಮೆಮಾಡಿ ಸುಲಭವಾಗಿ ಹಣಕಾಸು ಒದಗಿಸುವ ವ್ಯವಸ್ಥೆಯಾಗಿದೆ ಇದಕ್ಕೆ ಬ್ಯಾಂಕ್ನಿಂದ ಸೇವೆ ಒದಗಿಸಲು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ಇಂಡಸ್ಟ್ರೀಯಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್.ವಿ.ಪಾಟೀಲ, ಜಿಲ್ಲಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಅಧ್ಯಕ್ಷರಾದ ಪೀಟರ್ ಅಲೆಕ್ಸಾಂಡರ್, ಸ್ಮಾಲ್ ಇಂಡಸ್ಟ್ರೀಜ್ ಎಂಟರ್ಪ್ರೈಜಸ್ ಅಸೋಸಿಯೇಷನ್ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ, ಶರತ್ ಬಾಬು,ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಗಂಗಾಧರ ದೇಸಾಯಿ, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾಯಕ ನಿರ್ದೇಶಕರಾದ ಸಂತೋಷ ಸಜ್ಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.

