ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮನೆಗಳ ಇ-ಸ್ವತ್ತು (ಗಣಕೀಕೃತ ಉತಾರಿ)ಗಾಗಿ ಪಟ್ಟಣದ ಕೆಲವು ವಾರ್ಡ ನಿವಾಸಿಗಳು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ)ಪದಾಧಿಕಾರಿಗಳೊಂದಿಗೆ ಸೇರಿ ಪ್ರತಿಭಟನೆ ಕೈಗೊಂಡು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಟಿಪ್ಪು ವೃತ್ತದಲ್ಲಿ ಸೋಮವಾರ ಸಭೆ ಸೇರಿದ ೦೫,೦೮,೧೨,೧೬,೧೭ ನೇ ವಾರ್ಡುಗಳ ನಿವಾಸಿಗಳು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಗಣಕೀಕೃತ ಉತಾರೆಗಾಗಿ ಆಗ್ರಹಿಸಿ ಮೆರವಣಿಗೆ ಹೊರಟು ಮೊಹರೆ ಹಣಮಂತ್ರಾಯ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪಟ್ಟಣ ಪಂಚಾಯತಿ ತಲುಪಿ ಆವರಣದಲ್ಲಿ ಧರಣಿ ಕುಳಿತು ಪ್ರತಿಭಟನೆ ಕೈಗೊಂಡರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಮಾತನಾಡಿ, ವಾರ್ಡಿನಲ್ಲಿ ಹಲವು ವರ್ಷಗಳಿಂದ ಸಾವಿರಾರು ಕುಟುಂಬಗಳು ಮನೆ ಕಟ್ಟಿಸಿ ವಾಸವಾಗಿದ್ದಾರೆ ಅವರ ಮನೆಗಳಿಗೆ ಇ-ಸ್ವತ್ತು ಉತಾರಿ ಪಟ್ಟಣ ಪಂಚಾಯತಿಯಿAದ ನೀಡಬೇಕು. ಉತಾರಿ ನೀಡುವವರೆಗೆ ನಾವು ಕದಡುವದಿಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ ಅವರಿಗೆ ಆಗ್ರಹಿಸಿದರು.
ಕರವೇ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ತಾಲ್ಲೂಕು ಅಧ್ಯಕ್ಷ ರಹೀಮಾನ ಕಣಕಾಲ್ ಅವೋಗೇಶ್ವರಧಾಮ ಶ್ರೀ ಮಾತನಾಡಿ, ಹಲವು ವಷಗಳಿಂದ ವಾರ್ಡ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಕಂದಾಯ ನೀಡುತ್ತಿದ್ದು,ಇ-ಸ್ವತ್ತು ಉತಾರಿಯಿಂದ ಸರ್ಕಾರದ ಯೋಜನೆಗಳು ಸದುಪಯೋಗ ಪಡಿಸಿಕೊಳ್ಳಲು ಆಗುತ್ತದೆ ಆದಷ್ಟು ಬೇಗ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳುತ್ತಾ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಮನವಿ ಪತ್ರ ಸ್ವೀಕರಿಸಿ, ಈಗಾಗಲೇ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯಿಂದ ಸರ್ಕಾರಕ್ಕೆ ಪತ್ರ ಬರೆದು, ಹಕ್ಕುಪತ್ರ ಹಾಗೂ ಇ-ಸ್ವತ್ತು ಉತಾರಿಯ ತಾಂತ್ರಿಕ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ ಸರ್ಕಾರದಿಂದ ಸುತ್ತೋಲೆ ಬಂದಮೇಲೆ ನಿವಾಸಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕರವೇ ಪದಾಧಿಕಾರಿಗಳಾದ ಭೀಮನಗೌಡ ನಾಗರಾಳ, ಅಶೋಕ ಗೊಲ್ಲರ, ಆನಂದ ಹಡಗಲಿ, ನಾಗೇಶ ಕಮತಗಿ, ಪ್ರಭುಕುಮಾರ ಬಾಗೇವಾಡಿ, ದಿಲೀಪ್ ದೊಡ್ಡಮನಿ, ಹುಸೇನ್ ಕೊಕಟನೂರ, ಹಸನಸಾಬ ಹರನಾಳ, ದೌಲಸಾಬ್ ಯರಗಲ್, ದಾವೂದ್ ಮನಗೂಳಿ, ಸಲೀಂ ಮನಿಯಾರ ಸೇರಿದಂತೆ ಪಟ್ಟಣದ ಮಹಿಳೆಯರು ಇದ್ದರು.

