ಉದಯರಶ್ಮಿ ದಿನಪತ್ರಿಕೆ
ಇಂಡಿ: ಅತಿವೃಷ್ಠಿ, ಮಳೆ ಹಾನಿ, ಕೀಟ ಬಾಧೆ, ಗೊಬ್ಬರ ಬೆಲೆ ಹೆಚ್ಚಳ, ಕೂಲಿ ಕಾರ್ಮಿಕರ ಸಮಸ್ಯೆ ನಡುವೆ ಇಂಡಿ ತಾಲೂಕಿನ ರೈತರು ಕಬ್ಬು ಬೆಳೆದಿದ್ದು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನ ಹಿರೇಬೇವನೂರ ಸಕ್ಕರೆ ಕಾರ್ಖಾನೆ, ಭೀಮಾಶಂಕರ ಕಾರ್ಖಾನೆ ಮತ್ತು ನಾದ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಲೆ ನಿಗದಿ ಪಡಿಸಿದ್ದು ಮೂರು ಸಾವಿರ ರೂ ಪ್ರತಿ ಕ್ವಿಂಟಾಲಗೆ ನೀಡುತ್ತಿದ್ದಾರೆ. ಆದರೂ ರೈತರು ಪಕ್ಕದ ಮಹಾರಾಷ್ಟ್ರ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದು ಇದರಿಂದ ರಾಜ್ಯಕ್ಕೆ ತೆರಿಗೆ ನಷ್ಟವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆದಿರುವ ಇಂಡಿ ತಾಲೂಕಿನಲ್ಲಿ ಮೂರು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಮೂರು ವರ್ಷದಿಂದ ಪ್ರತಿ ದಿನ ಮೂರು ಸಾವಿರ ಟನ್ ಪ್ರತಿ ದಿನ ಪ್ರತಿ ಕಾರ್ಖಾನೆ ನುರಿಸುತ್ತಿದೆ. ಆದರೂ ಮಹಾರಾಷ್ಟ್ರದ ರಾಜ್ಯಕ್ಕೆ ಕಬ್ಬು ಸಾಗಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಕಬ್ಬು ಹಂಗಾವು ಆರಂಭವಾಗಿದ್ದು ನ. ೧ ರಿಂದ ಕಾರ್ಖಾನೆಯ ಕಬ್ಬು ನುರಿಸುತ್ತಿದೆ. ಈ ಬಾರಿ ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ ಮತ್ತು ಅಕ್ಕಲಕೋಟದ ಜೈನ ಸಕ್ಕರೆ ಕಾರ್ಖಾನೆ ಸೇರಿದಂತೆ ಚಡಚಣ ಭಾಗದ ಕಬ್ಬು ಮಹಾರಾಷ್ಟ್ರದ ಮಂಗಲವೇಡಾ ಜತ ಇತರೆ ಕಾರ್ಖಾನೆಗಳಿಗೆ ಪ್ರತಿದಿನ ಹತ್ತು ಸಾವಿರ ಟನ್ ಗೂ ಅಧಿಕ ಕಬ್ಬು ರವಾನೆ ಯಾಗುತ್ತಿದೆ.
ಅದಲ್ಲದೆ ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಈಥೆನಾಲ ಘಟಕ ಹೊಂದಿದ್ದು ಹಣ ನೀಡಲು ಪೈಪೋಟಿ ಮಾಡುವ ಸಾಧ್ಯತೆ ಇದೆ.
ಒಂದು ವೇಳೆ ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಾಣಿಕೆಯಾದರೆ ರಾಜ್ಯ ಸರಕಾರಕ್ಕೆ ಕೋಟ್ಯಾಂತರ ತೆರಿಗೆ ನಷ್ಟ ವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಧೂಳಖೇಡದಿಂದಲೇ ಪ್ರತಿದಿನ ಸೋಲಾಪುರದ ವಿವಿಧ ಕಡೆ ಕಬ್ಬು ರವಾನೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಧೂಳಖೇಡ, ಇಂಡಿ ತಾಲೂಕಿನ ಅಗರಖೇಡ, ನಾಲ್ಕು ಬ್ಯಾರೇಜುಗಳು ಮತ್ತು ಚಡಚಣ ತಾಲೂಕಿನಿಂದ ಶಿರಾಢೋಣ ಗಳಲ್ಲಿ ಕಬ್ಬು ಸಾಕಾಣಿಕೆಗೆ ಜಿಲ್ಲಾ ಆಡಳಿತ ನಿರ್ಭಂದ ಹೇರಬೇಕು. ಪ್ರತಿದಿನ ಅಂದಾಜು ಮೂರು ಸಾವಿರದಿಂದ ಐದು ಸಾವಿರ ಟನ್ ವರೆಗೆ ಇಂಡಿ ತಾಲೂಕಿನಿಂದ ಮತ್ತು ವಿವಿಧ ಕಡೆಗಳಿಂದ ಮತ್ತು ಚಡಚಣ ತಾಲೂಕಿನಿಂದ ಮೂರು ಸಾವಿರ ಟನ್ ಕಬ್ಬು ಮಹಾಗೆ ರವಾನೆಯಾಗುತ್ತಿದೆ. ಕೂಡಲೇ ಜಿಲ್ಲಾ ಆಡಳಿತ ಪೋಲಿಸ ಇಲಾಖೆ ಆರ್.ಟಿ.ಒ ಅಧಿಕಾರಿಗಳು ಕರ್ನಾಟಕಕ್ಕೆ ಆಗುವ ಹಾನಿ ತಪ್ಪಿಸಬೇಕೇಂಬುದು ರೈತರ ಆಗ್ರಹವಾಗಿದೆ.
“ತಾಲೂಕಿನ ಕಬ್ಬು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಪೂರೈಕೆಯಾಗುವದರಿಂದ ತೆರಿಗೆ ನಷ್ಟ ವಾಗುತ್ತದೆ. ಸರಕಾರ ಯಾವದೇ ಲಾಬಿಗೆ ಮಣಿಯದೇ ಮಹಾರಾಷ್ಟçದ ಕಾಖಾನೆಗಳಿಗೆ ಕಬ್ಬು ಸಾಗಾಣಿಕೆಗೆ ಮೂಗುದಾರ ಹಾಕಬೇಕು. ಕರ್ನಾಟಕದ ರೈತರಿಗೆ ಕರ್ನಾಟಕದಲ್ಲಿ ಕಬ್ಬು ಪೂರೈಸಿದ ೧೫ ದಿನಗಳೊಳಗಾಗಿ ಬಿಲ್ ಪಾವತಿಸಬೇಕು.”
– ಎಸ್.ಬಿ.ಕಂಬೋಗಿ
ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ

