ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆರೋಗ್ಯಕರ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ಜನರು ಪ್ರತಿದಿನ ಸೇವಿಸುವ ಆಹಾರ ಮತ್ತು ಪಾನೀಯಗಳು ಹೆಚ್ಚು ಪ್ರಭಾವವನ್ನು ಬೀರುತ್ತವೆ ಎಂದು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಹಾಗೂ ಶಹಾಪುರ ಚರ್ಮರೋಗ ಹಾಗೂ ಕಾಂತಿವರ್ಧಕ ಚಿಕಿತ್ಸಾಲಯ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶೇಷವಾಗಿ ಬೆಳಿಗ್ಗೆ ಚರ್ಮದ ಆರೈಕೆಯಲ್ಲಿ ತೊಡಗಿಕೊಂಡರೆ ಇದು ನಿಮ್ಮ ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.
ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಅನಾರೋಗ್ಯಕರ ಮತ್ತು ಒತ್ತಡದ ಜೀವನ ಶೈಲಿಯಿಂದಾಗಿ ದೇಹವು ವೇಗವಾಗಿ ವಯಸ್ಸಾಗುತ್ತದೆ. ನಯವಾದ ಚರ್ಮಕ್ಕಾಗಿ ಪ್ರಾಣಾಯಾಮದೊಂದಿಗೆ ಸ್ವಲ್ಪ ಆಸನ ಮಾಡುವುದರಿಂದ ಚರ್ಮವು ಹೊಳೆಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚರ್ಮರೋಗ ತಜ್ಞೆ ಡಾ.ಅಪೂರ್ವ ರಮೇಶ ಶಹಾಪುರ ಮಾತನಾಡಿ, ಚರ್ಮದಲ್ಲಿ ತುರಿಕೆ, ಕಜ್ಜಿಗಳು ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಶಿಬಿರದಲ್ಲಿ ೨೦೭ಜನ ಉಚಿತವಾಗಿ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಶಿಬಿರದಲ್ಲಿ ಚಿಕಿತ್ಸಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಇದ್ದರು.

