ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ಕೆಲವು ದಿನಗಳ ಹಿಂದೆ ಭಾರತ ಸರ್ವೋಚ್ಚ ನ್ಯಾಯಾಲಯವು ಪ್ರಕರಣ ಒಂದರಲ್ಲಿ ತಂದೆ ಪರಿಶಿಷ್ಟ ಜಾತಿ ಅಲ್ಲದಿದ್ದರೂ ತಾಯಿ ಪರಿಶಿಷ್ಟ ಜಾತಿ ಆಗಿದ್ದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಜಾತಿ ಪ್ರಮಾಣ ಒದಗಿಸಬೇಕೆಂದು ಆದೇಶ ನೀಡಿದ್ದು ಇದರಿಂದ ನಿಜ ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯವಾಗುತ್ತದೆ. ಜೊತೆಗೆ ಸರ್ವೋಚ್ಛ ನ್ಯಾಯಾಲಯದ ಆದೇಶ ದುರುಪಯೋಗ ಆಗುವ ಸಾಧ್ಯತೆ ಇದ್ದು, ಸದರಿ ನ್ಯಾಯಾಲಯದ ಆದೇಶವನ್ನು ಪರಾಮರ್ಶೆ ಮಾಡಲು ರಾಜ್ಯ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಭೀಮ್ ಸರಕಾರ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಮಾತನಾಡಿದ ಸಂಘಟನೆ ಮುಖಂಡರು, ಭವಿಷ್ಯದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಮಗಳಿಗೆ ಪರಿಶಿಷ್ಟ ಜಾತಿ ಅಲ್ಲದ ಪುರುಷನೊಂದಿಗೆ ಮದುವೆಯಾದಲ್ಲಿ ಅವರಿಗೆ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸರಿಪಾಲು ದೊರಕುವಂತಾಗಬೇಕು. ಏಕೆಂದರೆ ಮೇಲಿನ ಸರ್ವೋಚ್ಛ ನ್ಯಾಯಾಲಯದ ತೀರ್ಪು ಸರಿ ಅನಿಸಿದರೆ ಇದನ್ನು ಅಳವಡಿಸುವುದು ಅನಿವಾರ್ಯವಾಗುತ್ತದೆ. ಅಂದರೆ ಪರಿಶಿಷ್ಟ ಜಾತಿಯ ಜನರಿಗೆ ಆಗುವ ಸಂಭವನೀಯ ಅನ್ಯಾಯವನ್ನು ತಡೆಗಟ್ಟದಂತಾಗುತ್ತದೆ,ಇಲ್ಲವಾದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪು ಈ ಜನಾಂಗದ ಜನರಿಗೆ ಅನ್ಯಾಯವಾಗಿ ಮುಂಬರುವ ದಿನಗಳಲ್ಲಿ ದುರುಪಯೋಗವಾಗುವುದು ಖಚಿತ ಆದರಿಂದ ಸುಪ್ರೀಮಕೋರ್ಟಗೆ ಮನವರಿಕೆ ಮಾಡಿಕೊಟ್ಟು ಪರಿಶಿಷ್ಟ ಜಾತಿ ಮೀಸಲಾತಿ ದುರುಪಯೋಗವನ್ನು ತಡೆಗಟ್ಟಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರದ ಸಂಸದರಿಗೆ ಭೀಮ್ ಸರಕಾರ ಸಂಘಟನೆಯ ನಗರ ಘಟಕ ಅಧ್ಯಕ್ಷ ಸೋಮಶೇಖರ ಶಹಾಪೂರ ಹಾಗೂ ಭೀಮ್ ಸರಕಾರ ಸಂಘಟನಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಜಿಲ್ಲಾ ಕಾರ್ಯದರ್ಶಿಯಾದ ಅನೀಲ ಬೋರಗಿ, ಶಂಕರ ಬಜಂತ್ರಿ, ಕಿಟ್ಟು ಬನ್ನೂರ, ಅಪ್ಪು ಹೆಂಡೆಗಾರ, ಅಜಯ ಬೋರಗಿ, ಸುನೀಲ ಬೋರಗಿ, ಸುನೀಲ ಚಲವಾದಿ, ಸೋಮು ಹಟ್ಟಿ, ಮಾರುತಿ ಬೂದಿಹಾಳ, ಸಂಪತಕುಮಾರ ಹೊಸಳ್ಳಿ, ದೀಪು ಕಾಂಬಳೆ, ಎಲ್ಲರೂ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

