ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ನಮ್ಮ ಜನಪದ ಹಾಡುಗಳು, ಹಬ್ಬಗಳು ಮತ್ತು ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಶ್ರೀ ದತ್ತಗುರು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರಾಯಪ್ಪ. ಎಸ್. ಹೂಗಾರ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಶ್ರೀ ದತ್ತಗುರು ಎಜುಕೇಷನ್ ಟ್ರಸ್ಟ್ ಪರಸನಹಳ್ಳಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ” ನುಡಿ-ಸಂಸ್ಕೃತಿ ಉಳಿಸಿ ಬೆಳೆಸಬೇಕು ಹಾಗೂ ಜನಪದ ಕಲಾವಿದರ ಸಂಭ್ರಮ” ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದವರು.
ಯುವಕರು ಮತ್ತು ವಿದ್ಯಾರ್ಥಿಗಳು ಮೊಬೈಲ್, ಟಿವಿ, ಲ್ಯಾಬ್ ಟಾಪ್, ಮಾಹಿತಿ ತಂತ್ರಜ್ಞಾನಕ್ಕೆ ಮಾರುಹೋಗದೆ, ನಮ್ಮ ಜಾನಪದ ಸಂಸ್ಕೃತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮತ್ತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವುದು ಸಮಾಜದ ಕರ್ತವ್ಯವಾಗಿದೆ ಎಂದವರು. ತಲೆ ತಲೆಮಾರುಗಳಿಂದ ಈ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಕಲಾವಿದರನ್ನು ಗೌರವಿಸುವುದು ಮತ್ತು ಅವರನ್ನು ಸತ್ಕರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಹೂಗಾರ್, ಭೀಮರಾಯ ಆರ್. ಕುಲಕರ್ಣಿ, ಪುರಸಭೆ ಸದ್ಯಸರಾದ ಮುದೆಪ್ಪ ಪೂಜಾರಿ, ಗುರುನಾಥ ಬ್ಯಾಕೋಡ್, ಅನಿಲ್ ಹೊಸಗೌಡ್ರು, ಪರಶುರಾಮ್ ಸುರಪುರ, ಕಲಾವಿದರಾದ ಶಂಕರ್ ಶಾಸ್ತ್ರೀ, ನಿಂಗಪ್ಪ ಭಜಂತ್ರಿ, ಸಿದ್ದರಾಮ ಭಜಂತ್ರಿ, ಬಸವರಾಜ್ ಹೊಗಾರ್ ಹಾಗೂ ಇತರರು ಹಾಜರಿದ್ದರು.
“ಜಾನಪದ ಉಳಿಸಿ, ಬೆಳೆಸಿ” ಎಂಬುದು ಕೇವಲ ಘೋಷಣೆಯಲ್ಲ, ನಮ್ಮ ಸಂಸ್ಕೃತಿಯನ್ನು ಜೀವಂತವಾಗಿ ಇಡುವ ಸಂಕಲ್ಪ ಮಾಡೋಣ.
ಜಾನಪದವು ನಮ್ಮ ನಾಡಿನ ಆತ್ಮ ಮತ್ತು ಮೂಲ ಬೇರು. ಅದನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ನಾವು ನಮ್ಮತನವನ್ನು ಮತ್ತು ಹೆಮ್ಮೆಯನ್ನು ಉಳಿಸಿಕೊಂಡಂತೆ.”
– ಬಸವರಾಜ್ ಹೂಗಾರ
ಶ್ರೀ ದತ್ತಗುರು ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ

