ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೊ ಎಸೆದ ಪ್ರಕರಣ, ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ದಾಳಿ ಹಾಗೂ ಇದು ಪ್ರತಿ ದಲಿತನ ಮೇಲಿನ ದೌರ್ಜನ್ಯ – ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತೀವ್ರವಾಗಿ ಖಂಡಿಸಿದ್ದಾರೆ.
ದೇಶದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಶೊ ಎಸೆದ ಘಟನೆಯು ಕೇವಲ ಒಂದು ವ್ಯಕ್ತಿಯ ಮೇಲಿನ ದಾಳಿಯಲ್ಲ, ಇದು ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಯೋಜಿತ ಷಡ್ಯಂತ್ರವಾಗಿದೆ. ಈ ಘಟನೆಯು ಪ್ರತಿ ದಲಿತನ ಗೌರವ ಮತ್ತು ನ್ಯಾಯದ ಹಕ್ಕನ್ನು ಧಿಕ್ಕರಿಸುವ ದೌರ್ಜನ್ಯವಾಗಿದ್ದು, ಬಿಜೆಪಿ ಸರ್ಕಾರದಿಂದ ನ್ಯಾಯದ ಧ್ವನಿಯನ್ನು ಮುಚ್ಚುವ ಪ್ರಯತ್ನವೆಂದು ಆಮ್ ಆದ್ಮಿ ಪಾರ್ಟಿ (ಆಪ್) ಖಂಡಿಸುತ್ತದೆ ಎಂದು ಭೋಗೇಶ್ ಸೋಲಾಪುರ್ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ, ವಿಜಯಪುರದಲ್ಲಿ ಅಕ್ಟೋಬರ್ 16 ರಂದು ನಡೆಯುತ್ತಿರುವ “ವಿಜಯಪುರ ಬಂದ್” ಗೆ ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕ ಸಂಪೂರ್ಣ ಬೆಂಬಲವಿದೆ ಎಂದು ಭೋಗೇಶ್ ಸೋಲಾಪುರ್ ಘೋಷಿಸಿದ್ದಾರೆ.
ಈ ಬಂದ್ ನ್ಯಾಯಾಂಗದ ಸ್ವತಂತ್ರತೆಯನ್ನು ರಕ್ಷಿಸುವ, ದಲಿತರ ಗೌರವವನ್ನು ಮರುಸ್ಥಾಪಿಸುವ ಮತ್ತು ದೇಶದ ಸಾಮಾನ್ಯ ಜನರ ಹಕ್ಕುಗಳಿಗಾಗಿ ಹೋರಾಡುವ ಪ್ರತೀಕವಾಗಿದೆ. ನಾವು ಆಮ್ ಆದ್ಮಿ ಪಾರ್ಟಿ ಈ ಬಂದ್‌ನಲ್ಲಿ ಭಾಗವಹಿಸಿ, ಈ ಷಡ್ಯಂತ್ರಕ್ಕೆ ತೀವ್ರ ವಿರೋಧವನ್ನು ನೀಡುತ್ತೇವು. ಇದು ಕೇವಲ ವಿಜಯಪುರಕ್ಕೆ ಸೀಮಿತವಲ್ಲ, ದೇಶಾದ್ಯಂತ ನ್ಯಾಯ ಮತ್ತು ಸಮಾನತೆಗಾಗಿ ಒಂದು ಜಾಗೃತಿ ಚಳವಳಿಯಾಗಲಿ ಎಂದು ಅವರು ಹೇಳಿದ್ದಾರೆ.