ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ಉಪನ್ಯಾಸಕರು
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಹೋವಾರ್ಡ ವಾರನ್ ಬಫೆಟ್ ಅವರು “ಮಣ್ಣು ಜೀವಂತ ಪರಿಸರ ವ್ಯವಸ್ಥೆಯಾಗಿದೆ ಮತ್ತು ಇದು ರೈತರ ಅತ್ಯಂತ ಅಮೂಲ್ಯ ಆಸ್ತಿಯಾಗಿದೆ. ರೈತನ ಉತ್ಪಾದಕ ಸಾಮರ್ಥ್ಯವು ಅವನ ಅಥವಾ ಅವಳ ಮಣ್ಣಿನ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿರುವದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಮಣ್ಣು ಎಂಬುದು ಭೂಮಿಯ ಮೇಲಿರುವ ಘನ, ದ್ರವ ಮತ್ತು ಅನಿಲ ರೂಪದ ವಸ್ತುಗಳಿಂದ ಕೂಡಿರುವ ಸಂಕೀರ್ಣವಾದ ವ್ಯವಸ್ಥೆಯಾಗಿದೆ. ಸಸ್ಯಗಳ ಬೆಳವಣಿಗೆಗೆ ನೆರವು ನೀಡುವ ಈ ಮಣ್ಣು ಜಗತ್ತಿನ ಆಹಾರ ಭದ್ರತೆಗೆ ತನ್ನದೇ ಆದ ಮಹತ್ತರವಾದ ಕೊಡುಗೆ ನೀಡುತ್ತಿದೆ. ಅದಕ್ಕೆ ಮಣ್ಣು ಎಂದರೆ ಭೂ ತಾಯಿ ಅಥವಾ ಭೂ ಮಾತೆ ಎಂತಲೂ ಕರೆಯುತ್ತಾರೆ. ಮಣ್ಣಿಲ್ಲದೇ ಜೀವ ಸಂಕುಲವೇ ಇಲ್ಲ ಎಂದರೆ ತಪ್ಪಾಗಲಾರದು.
ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ಅತಿ ಅಗತ್ಯ ಹಾಗೂ ಪೂರಕವಾಗಿರುವ ಮಣ್ಣು ಇಂದು ವಿವಿಧ ಪ್ರಕಾರದ ಮಾಲಿನ್ಯಗಳಿಂದಾಗಿ ಕಲುಷಿತಗೊಳ್ಳುತ್ತಿದೆ. ಅದರಲ್ಲಿರುವ ಗುಣಮಟ್ಟ, ಪೋಷಕಾಂಶಗಳು ಮತ್ತು ಫಲವತ್ತತೆಯ ಮಟ್ಟ ಕಡಿಮೆಯಾಗುತ್ತಿದೆ. ಮಣ್ಣು ನಿಸರ್ಗದ ಅಮೂಲ್ಯª ಸಂಪತ್ತು. ಮಾಲಿನ್ಯವನ್ನು ತಡೆಗಟ್ಟಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಸಂಕಲ್ಪ ಮಾಡೋಣ. ಈ ನಿಟ್ಟಿನಲ್ಲಿ ಮಣ್ಣಿನ ಅಮೂಲ್ಯವಾದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಮತ್ತು ಮಣ್ಣಿನ ಮಹತ್ವದ ಬಗ್ಗೆ ರೈತರು ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಈ ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತಿದೆ. ಸಮಗ್ರ ಕೃಷಿ ಚಟುವಟಿಕೆಗಳಿಗೆ ಮೂಲಾಧಾರ ಆಗಿರುವ ಮಣ್ಣನ್ನು ಉಳಿಸಿ, ಮಣ್ಣಿಗೆ ಹಾನಿ ಉಂಟು ಮಾಡದೇ ನೈಸರ್ಗಿಕ ಗೊಬ್ಬರಗಳನ್ನೇ ಬಳಸುತ್ತಾ, ರೈತರ ಸಿರಿ ಸಂಪತ್ತಾಗಿರುವ ಈ ಮಣ್ಣಿನ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ.
ಹಿನ್ನೆಲೆ

ಪ್ರತಿ ವರ್ಷ ಡಿಸೆಂಬರ ೫ ರಂದು ಉತ್ತಮ ಮಣ್ಣಿನ ಮೌಲ್ಯದ ಅರಿವು ಮೂಡಿಸಲು ಹಾಗೂ ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಉತ್ತೇಜಿಸಲು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ೨೦೦೨ ರಲ್ಲಿ ಮಣ್ಣು ವಿಜ್ಞಾನಗಳ ಅಂತರಾಷ್ಟ್ರೀಯ ಒಕ್ಕೂಟ (ಐ.ಯು.ಎಸ್.ಎಸ್) ಮಣ್ಣಿನ ನೆನಪಿಗಗಿ ಈ ದಿನವನ್ನು ಆಚರಿಸಲು ಪ್ರತಿಪಾದಿಸಿತು. ನಂತರ ೨೦೧೩ ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ೬೮ ನೇಯ ಸಮ್ಮೇಳನದಲ್ಲಿ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲು ಅನುಮೋದನೆ ನೀಡಿತು. ಈ ಫಲಶ್ರುತಿಯಾಗಿ ೨೦೧೪ ಡಿಸೆಂಬರ ೫ ರಂದು ಮೊಟ್ಟಮೊದಲ ಬಾರಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಮಣ್ಣು ದಿನವನ್ನು ಆಚರಿಸಲಾಯಿತು.
ಮಣ್ಣು ದಿನದ ಆಚರಣೆಯ ಉದ್ಧೇಶ
ಇಂದಿನ ಆಧುನಿಕ ಪದ್ಧತಿಯ ಬೇಸಾಯ ಕ್ರಮ, ನೀರಾವರಿ ಸೌಲಭ್ಯ, ಮಿತಿಮೀರಿದ ರಸಗೊಬ್ಬರ ಬಳಕೆ, ಕಳೆ ತೆಗೆಯಲು ಬಳಸುವ ಕೀಟನಾಶಕ ಮತ್ತು ಪ್ಲಾಸ್ಟಿಕ್ ಬಳಕೆಯಂತಹ ಕಾರಣಗಳಿಂದ ಆಗುತ್ತಿರುವ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬ ರೈತ, ಸಾರ್ವಜನಿಕರು ಮತ್ತು ಸಮುದಾಯ ಪಣತೊಡಬೇಕಾಗಿದೆ. ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಗಟ್ಟಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಈ ದಿನದ ಆಚರಣೆಯು ಮಹತ್ವ ಪಡೆದುಕೊಂಡಿದೆ.
ರೈತ ಸಮುದಾಯ ಮತ್ತು ಜನರಲ್ಲಿ ಮಣ್ಣಿನ ನಿರ್ವಹಣೆಯಲ್ಲಿ ಬೆಳೆಯುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಮಣ್ಣಿನ ಅರಿವನ್ನು ಹೆಚ್ಚಿಸಲು ಮತ್ತು ಮಣ್ಣಿನ ಸತ್ವವನ್ನು ಸುಧಾರಿಸುವ ಮತ್ತು ಸಾವಯವ ವ್ಯವಸಾಯ ಪದ್ಧತಿಯನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವದೇ ಈ ದಿನದ ಆಚರಣೆಯ ಪ್ರಮುಖ ಧ್ಯೇಯೋದ್ಧೇಶವಾಗಿದೆ.
ಮಣ್ಣು ಸಂರಕ್ಷಣೆ ನಮಗೆ ಏಕೆ ಬೇಕು?
ಅರಣ್ಯ ನಾಶ, ಗಿಡ-ಮರ ಕಡಿಯುವುದು, ಭಾರಿ ಮಳೆ ಅಥವಾ ಪ್ರವಾಹದಂತಹ ಸಂದರ್ಭಗಳಲ್ಲಿ ಮಣ್ಣಿನ ಸವೆತ ಹೆಚ್ಚಾಗುತ್ತಿದೆ. ಹೀಗಾಗಿ ಭೂಮಿಯ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಅವಶ್ಯಕ ಎಂಬುದನ್ನು ಸಾರ್ವಜನಿಕರಲ್ಲಿ ಜನಜಾಗೃತಿ ಮೂಲಕ ಮನವರಿಕೆ ಮಾಡಿಕೊಡಬೇಕಾಗಿದೆ. ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳ ಅಸ್ತಿತ್ವಕ್ಕೆ ಮಣ್ಣಿನ ಮಹತ್ವದ ಬಗ್ಗೆ ನಮ್ಮ ಸುತ್ತಮುತ್ತಲಿನ ಜನರಲ್ಲಿ ಅರಿವು ಮೂಡಿಸಬೇಕು. ನಾವು ಆರೋಗ್ಯಕರ ಜೀವನವನ್ನು ಹೊಂದಲು, ನಮಗೆಲ್ಲರಿಗೂ ಆರೋಗ್ಯಕರವಾದ ಮತ್ತು ರಾಸಾಯನಿಕಗಳಿಂದ ಮುಕ್ತವಾದ ಮಣ್ಣು ಬೇಕು. ೨೦೫೦ ರ ವೇಳೆಗೆ ಈ ಗ್ರಹದಲ್ಲಿ ಒಂಬತ್ತು ಶತಕೋಟಿಗೂ ಹೆಚ್ಚು ಜನರು ಮತ್ತು ರೈತರು ಅನಿರೀಕ್ಷಿತ ಮತ್ತು ಬದಲಾಗುತ್ತಿರುವ ಹವಾಮಾನದಲ್ಲಿ ಶೇ ೪೯% ರಷ್ಟು ಹೆಚ್ಚು ಆಹಾರವನ್ನು ಉತ್ಪಾದಿಸಬೇಕಾಗುತ್ತದೆ. ಹೀಗಾಗಿ ಉತ್ತಮ ಮತ್ತು ಫಲವತ್ತತೆಯಿಂದ ಕೂಡಿದ ಮಣ್ಣಿಲ್ಲದೇ ಈ ಸವಾಲನ್ನು ನಾವು ಎದುರಿಸಲು ಮತ್ತು ಇಡೀ ಮಾನವ ಸಂಕುಲದ ಅಭಿವೃದ್ಧಿಯನ್ನು ಸಾಧಿಸಲು ಕಷ್ಟಸಾಧ್ಯವೆಂದು ಹೇಳಬಹುದು.
ಇತ್ತೀಚಿನ ದಿನಗಳಲ್ಲಿ ಮಾನವನ ಅತಿಯಾಸೆಯಿಂದ ಗಣಿಗಾರಿಕೆ, ಸಂಪನ್ಮೂಲ ಹೊರತೆಗೆಯುವುದು, ಕೈಗಾರಿಕೆಗಳ ತ್ಯಾಜ್ಯ ವಸ್ತುಗಳನ್ನು ಭೂಮಿಯ ಮೇಲೆ ಎಲ್ಲೆಂದರಲ್ಲಿ ಹಾಕುವುದು, ಕಡಲ ಕೊರೆತ, ಪ್ರವಾಹದ ನೀರಿನಿಂದ ಮಣ್ಣು ಕೊಚ್ಚಿಕೊಂಡು ಹೋಗುವುದು, ಭೂ ಸವಕಳಿ, ಭೂಮಿ ಅಗೆಯುವುದು ಇವೆಲ್ಲ ಕಾರಣಗಳಿಂದ ಭೂಮಿಯ ಮೇಲೆ ಅತಿಯಾದ ಶೋಷಣೆ ಅಥವಾ ಮಣ್ಣು ಫಲವತ್ತತೆಯನ್ನು ಹಾಳು ಮಾಡುವಂತಹ ಸನ್ನಿವೇಶಗಳನ್ನು ಕಂಡುಬರುತ್ತಿವೆ. ಆದ್ದರಿಂದ ನಮಗೆಲ್ಲ ಏನೆಲ್ಲ ಫಸಲು ಅಥವಾ ಬೆಳೆಯನ್ನು ನೀಡುವ ಈ ಭೂಮಿಯ ಮಣ್ಣನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
೨೦೨೫ ನೇ ವರ್ಷದ ಘೋಷವಾಕ್ಯ
ಈ ವರ್ಷ ವಿಶ್ವ ಮಣ್ಣು ದಿನದ ಘೋಷವಾಕ್ಯವು “ಮಣ್ಣು-ಆಹಾರದ ಉತ್ಪಾದನೆಯ ಆರಂಭದ ಸ್ಥಳ” ಅದಕ್ಕಾಗಿ ಪ್ರಸ್ತುತ ದಿನಗಳಲ್ಲಿ ಆಧುನಿಕ ಕೃಷಿ ಪದ್ಧತಿಯಿಂದ ಮಣ್ಣು ರಸಗೊಬ್ಬರ, ಕೀಟನಾಶಕ ಮತ್ತು ರಾಸಾಯನಿಕಗಳನ್ನು ಮಿತಿಮೀರಿ ಬಳಸುವುದರಿಂದ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಮಣ್ಣಿನ ಆರೋಗ್ಯವನ್ನು ಸುಧಾರಿಸಬೇಕೆಂಬ ಸಂದೇಶದೊಂದಿಗೆ ಕೃಷಿ ಆಹಾರ ವ್ಯವಸ್ಥೆಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.
ಕೊನೆಯ ಹನಿ
ಫ್ರಾಂಕ್ಲೀನ್ ರೂಸ್‌ವೆಲ್ಟ್ ಅವರು, “ತನ್ನ ಮಣ್ಣನ್ನು ನಾಶಮಾಡುವ ರಾಷ್ಟ್ರವು ತನ್ನನ್ನು ತಾನೇ ನಾಶಮಾಡಿಕೊಳ್ಳುತ್ತದೆ” ಎಂದು ಹೇಳಿದ್ದಾರೆ. ಕೃಷಿ ವ್ಯವಸ್ಥೆಯ ಮೂಲಾಧಾರವು ಈ ಮಣ್ಣು ಆಗಿದೆ. ಭೂ ಅಸಮತೋಲನ ಉಂಟಾಗುವ ಮೊದಲು ನಾವೆಲ್ಲರೂ ಎಚ್ಚೆತ್ತುಕೊಂಡು ಈ ಭೂಮಿ, ಮಣ್ಣು ಮತ್ತು ನೀರು ನಾಶವಾಗದಂತೆ, ವೃಥಾ ಪೋಲಾಗದಂತೆ ಮತ್ತು ಅದರ ಗುಣಮಟ್ಟದೊಂದಿಗೆ ಫಲವತ್ತತೆ ಹಾಳಾಗದಂತೆ ತಡೆಯಲು ಕಾಳಜಿ ವಹಿಸಬೇಕಾಗಿದೆ. ಆರೋಗ್ಯಕರ ಮತ್ತು ಫಲವತ್ತೆತೆಯಿಂದ ಕೂಡಿದ ಮಣ್ಣು ಇಲ್ಲದೇ ನಾವು ಯಾವುದೇ ಆಹಾರ ಧಾನ್ಯವನ್ನು ಅಥವಾ ಬೆಳೆಯಲು ಅಸಾಧ್ಯ. ನಮ್ಮ ಮುಂದಿನ ಜನಾಂಗಕ್ಕಾಗಿ ಬೇಕಾಗುವ ಆಹಾರ ಉತ್ಪಾದನೆಗಾಗಿ ಮತ್ತು ಭೂ ಸಮತೋಲನ ಕಾಯ್ದುಕೊಳ್ಳಲು ಈ ಮಣ್ಣು ಉಳಿಸಿ ಅಭಿಯಾನಗಳನ್ನು ಹಮ್ಮಿಕೊಂಡು ಮಣ್ಣಿನ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಈ ದಿನದ ಆಚರಣೆಯು ನಿಜಕ್ಕೂ ಅರ್ಥಪೂರ್ಣವಾಗಲಿದೆ. ಈ ಪೃಥ್ವಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿಯು ಮಣ್ಣು ಸಂರಕ್ಷಣೆಗಾಗಿ ಮತ್ತು ಮಣ್ಣು ಉಳಿಸಲು ಕೈ ಜೋಡಿಸೋಣ.


