ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಗ್ಲಿಷ್ ಅನುವಾದ ತುಂಬಾ ಕಷ್ಟಕರ ಕೆಲಸ. ಡಾ. ಯಲಿಗಾರ ಅವರು ಕೇವಲ ವಚನಗಳನ್ನು ಅಷ್ಟೇ ಅಲ್ಲದೆ, ಸಮಗ್ರ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿ ಇನ್ನಷ್ಟು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲಿ ಎಂದು ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದರು.
ಬುಧವಾರ ಸಂಜೆ ನಗರದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಶ್ರೀ ಬಸವರಾಜ ಎಲಿಗಾರ್ ಇವರಿಗೆ ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಹೀಗೆಲ್ಲ ಮಹಿಳಾ ಸಮಾನತೆ ಬಗ್ಗೆ ಮಾತನಾಡುತ್ತಿದ್ದೇವೆ. 12ನೇ ಶತಮಾನದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕೊಟ್ಟು ಲಿಂಗ ತಾರತಮ್ಯತೆಯನ್ನು ಹೋಗಲಾಡಿಸಿದವರು ಬಸವಣ್ಣನವರು ಎಂದು ಹೇಳಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಬಸವರಾಜ ಯಲಿಗಾರ ಅವರು, ನಿಮ್ಮ ಸನ್ಮಾನಕ್ಕೆ ನಾನು ಯಾವತ್ತಿಗೂ ತಾವು ನನ್ನ ಮೇಲೆ ಇಟ್ಟರುವ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ಚಿರಋಣಿ. ಇಂಥ ಮಹತ್ವ ಕಾರ್ಯವನ್ನು ನನ್ನ ಕೈಯಿಂದ ಬಸವಣ್ಣ ಮಾಡಿಸಿದ್ದಾನೆ, ಇದರಲ್ಲಿ ನನ್ನದೇನು ದೊಡ್ಡ ಪಾತ್ರವಿಲ್ಲ ಎಂದು ಬಸವಣ್ಣನನ್ನು ನೆನೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು, ಕನ್ನಡ ಸಾಹಿತ್ಯ ಲೋಕಕ್ಕೆ ಯಲಿಗಾರರು ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಸರ್ವರನ್ನು ಸಮನಾಗಿ ಕಾಣುವ ಸಾಹಿತ್ಯ ಯಾವುದಾದರೂ ಇದ್ದರೆ ಅದು ವಚನ ಸಾಹಿತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಶರಣಯ್ಯ ಭಂಡಾರಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಡಾ.ಮಹಾಂತೇಶ ಬಿರಾದಾರ ಅವರು, ಡಿವೈಎಸ್ಪಿ ಎಲಿಗಾರರು ಯಾವುದೇ ಶಿಫಾರಸ್ಸು ಮಾಡದೆ ಗೌರವ ಡಾಕ್ಟರೇಟ್ ಪಡೆದಿದ್ದು ನಮಗೆಲ್ಲರಿಗೂ ಹೆಮ್ಮೆ. ಅದರಲ್ಲಿಯೂ ಪೊಲೀಸ ಇಲಾಖೆಯಲ್ಲಿ ಇದ್ದುಕೊಂಡು ಗೌರವ ಡಾಕ್ಟರೇಟ್ ಅಂತ ಪದವಿ ಪಡೆಯುವುದು ಇಂದಿನ ಕಾಲದಲ್ಲಿ ಸುಲಭದ ಮಾತಲ್ಲ. ಇನ್ನೂ ಸಧ್ಯದಲ್ಲಿಯೇ ಮತ್ತಷ್ಟು ಅವರ ಕೃತಿಗಳು ಹೊರಬರಲಿವೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಸಂತಕುಮಾರ ಪಾಟೀಲ, ಹಾಸಿಮಪೀರ್ ವಾಲಿಕಾರ್, ಶರಣಯ್ಯ ಭಂಡಾರಿಮಠ, ಡಿ ಜಿ ಬಿರಾದಾರ್, ಎಮ್ ಆರ್ ಪಾಟೀಲ್, ಬಿಎಸ್ ಬಿರಾದಾರ್, ವಿವೇಕಾನಂದ ಹುಂಡೆಕಾರ ಇದ್ದರು.
ಶರಣು ಸಬರದ ಸ್ವಾಗತಿಸಿದರು. ಕೃತಿ ಪರಿಚಯ ಮೊಹಮ್ಮದಗೌಸ್ ಹವಾಲ್ದಾರ್ ಮಾಡಿದರು. ಕುಮಾರಿ ಸಾನಿಯಾ ಜಿದ್ದಿ ನಿರೂಪಿಸಿದರು. ವಿನೋದ ಮಣ್ಣೂರ ವಂದಿಸಿದರು.

