ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸರ್ವೇ ನಂ.132 ಕ್ಷೇತ್ರ-31 ಗುಂಟೆ ಜಾಗೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವುದು ಕಂಡು ಬಂದಿದ್ದು, ಅತಿಕ್ರಮಣ ತೆರವುಗೊಳಿಸಿ, ಈ ಜಾಗೆಯನ್ನು ಪ.ಪಂ.ಗೆ ನೀಡಬೇಕು ಎಂದು ಪ.ಪಂ. ಸದಸ್ಯರು ಗುರುವಾರ ತಹಶೀಲದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ ಮಾತನಾಡಿ, ಪಟ್ಟಣದ ಇಂಡಿ ಮುಖ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ಸ.ನಂ. 132 ರಲ್ಲಿ ಇರುವ ಕ್ಷೇತ್ರ-31 ಗುಂಟೆ ಜಾಗೆ ಸುಮಾರು ಕೋಟ್ಯಾಂತರ ರೂ. ಸಧ್ಯ ಮಾರುಕಟ್ಟೆ ಬೆಲೆ ಹೊಂದಿದ್ದು, ಈ ಜಾಗೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಜಾಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು, ಅಲ್ಲಿ ನಾಮಫಲಕ ಕೂಡ ಅಳವಡಿಸಲಾಗಿದೆ. ಆದರೂ ಕೂಡ ಕೆಲ ಖಾಸಗಿ ಪ್ರಭಾವಿ ವ್ಯಕ್ತಿಗಳು ಜಾಗೆಯನ್ನು ಅತಿಕ್ರಮಣ ಮಾಡಿ ಮುಖ್ಯ ಇಂಡಿ ರಾಜ್ಯ ಹೆದ್ದಾರಿಗೆ ಕೂಡುವಂತೆ ರಸ್ತೆ ನಿರ್ಮಿಸಿದ್ದಾರೆ ಎಂದು ಹೇಳಿದ ಅವರು, ತಹಶೀಲದಾರರು ಸದರಿ ಜಾಗೆಯನ್ನು ಪರಿಶೀಲನೆ ಮಾಡಿ, ಇದರ ಹದ್ದು ಬಸ್ತು ಗುರುತು ಮಾಡಿ ಜಾಗೆಯನ್ನು ಪ.ಪಂ.ಗೆ ಹಸ್ತಾಂತರಿಸಿದರೆ ಅಲ್ಲಿ ನಾವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ ಅದರಿಂದ ಪ.ಪಂ.ಗೆ ಹಾಗೂ ಸರಕಾರಕ್ಕೆ ವರ್ಷಕ್ಕೆ ಲಕ್ಷಾಂತರ ರೂ. ಲಾಭ ಬರುತ್ತದೆ ಎಂದು ಹೇಳಿದರು.
ತಕ್ಷಣವೇ ಕಾರ್ಯೋನ್ಮುಖರಾದ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರು ಪ.ಪಂ. ಮುಖ್ಯಾಧಿಕಾರಿ ಬಿ.ಕೆ. ತಾವಸೆ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ, ಇಬ್ಬರೂ ಸ್ಥಳಕ್ಕೆ ತೆರಳಿ, ಸ್ಥಳ ಪರಿಶೀಲನೆ ಮಾಡಲಾಗಿ, ಅಪ್ಪಾಸಾಹೇಬ ಸಿಂಧೆ ಇವರ ಜಮೀನಿಂದ ಇಂಡಿಯನ್ ಆಯಿಲ್ ಪೆಟ್ರೋಲ ಪಂಪ್ ವರೆಗಿನ 31 ಗುಂಟೆ ಜಾಗೆ ಇದೆ ಎಂದು ತಹಶೀಲದಾರ ಸಂಜಯ ಇಂಗಳೆ ಹೇಳಿದ ಅವರು, ಇಲ್ಲಿ ಖಾಸಗಿ ವ್ಯಕ್ತಿಗಳಿಂದ ಅಲ್ಲಿ ರಸ್ತೆ ನಿರ್ಮಿಸಿರುವದು ಕಂಡು ಬಂದಿದ್ದು, ತಕ್ಷಣ ಪ.ಪಂ. ಜೆ.ಸಿ.ಬಿ. ಮುಖಾಂತರ ಸರಕಾರಿ ಜಾಗೆಯ 31 ಗುಂಟೆ ಜಾಗೆಯ ಸುತ್ತಲೂ ತಗ್ಗು ತೋಡಿಸುವ ಕಾರ್ಯ ಆರಂಭಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಸಂಜಯ ಇಂಗಳೆ ಮಾತನಾಡಿ, ಈ ಜಾಗೆಯನ್ನು ನಾನು ಪುನಃ ಸರ್ವೆ ಮಾಡಿಸಿ, ಜಾಗೆಯ ಸುತ್ತಲೂ ಸಿಮೆಂಟ್ ಕಂಬಗಳನ್ನು ನಡೆಸಿ ಅದಕ್ಕೆ ತಂತಿ ಬೇಲಿ ಹಾಕಿಸಿ, ಈ ಜಾಗೆಯಲ್ಲಿ ಯಾವುದೇ ರಸ್ತೆ ನಿರ್ಮಿಸುವುದು ಹಾಗೂ ಅತೀಕ್ರಮಣ ಮಾಡದಂತೆ ನೋಡಿಕೊಳ್ಳುತ್ತೇನೆ ಎಂದರು. ಒಂದು ವೇಳೆ ಇದಕ್ಕೆ ಯಾವುದೇ ತರಹದ ಒತ್ತಡ ಬಂದರೂ ಕೂಡ ಅದಕ್ಕೆ ನಾನು ಯಾವುದೇ ರೀತಿಯ ಆಸ್ಪದ ನೀಡದೇ ಈ ಜಾಗೆಯನ್ನು ನಾನು ಕಾಪಾಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಪ್ರಕಾಶಗೌಡ ಪಾಟೀಲ, ರಾಜು ಕೋಳಿ, ಬಾಲಾಜಿ ಗಾಡಿವಡ್ಡರ, ದರ್ಮಣ್ಣ ಬನಸೋಡೆ, ವಾಸೀಮ ಮುಲ್ಲಾ, ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತ ಅಣ್ಣಪ್ಪ ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು.

