ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಗುಡುಗು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೆರೆ ಪರಿಹಾರ ವಿಷಯವಾಗಿ ರಾಜ್ಯ ಸರ್ಕಾರದ ಮಂತ್ರಿಗಳು ಬೇಜವಾಬ್ದಾರಿ ತೋರಿದ್ದಾರೆ, ಹೀಗಾಗಿ ಅವರ ಕೊರಳ ಪಟ್ಟಿಯನ್ನು ಹಿಡಿದು ರೈತರ ಪರವಾಗಿ ನಮ್ಮ ಹಕ್ಕನ್ನು ಕೇಳಬೇಕಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಗುಡುಗಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಒಂದೇ ಒಂದು ತಾಲೂಕುಗಳಿಗೆ ಭೇಟಿ ನೀಡಿಲ್ಲ, ಕೆಡಿಪಿ ಸಭೆಯನ್ನೂ ನಡೆಸಿಲ್ಲ, ನೆರೆ ಪರಿಹಾರ ವಿಷಯವಾಗಿಯೂ ಒಂದೇ ಒಂದು ಕಡೆ ಸಭೆ ನಡೆಸಿಲ್ಲ, ರಾಜ್ಯದ ಯಾವ ಮೂಲೆಯಲ್ಲಿಯೂ ಈ ವಿಷಯಾಧಾರಿತ ಸಭೆ ನಡೆಸಿಲ್ಲ, ಕೇವಲ ಹೆಲಿಕ್ಯಾಪ್ಟರ್‌ನಲ್ಲಿ ಓಡಾಡುವುದನ್ನು ವೈರಲ್ ಮಾಡುವ ನೀವುಗಳು ನಿಮ್ಮ ಪಾದವನ್ನು ರೈತರ ಹೊಲದಲ್ಲಿ ಇರಿಸಿದ್ದೀರಾ? ಕೃಷಿ ಸಚಿವರು, ತೋಟಗಾರಿಕಾ ಸಚಿವರು ರೈತರ ಜಮೀನುಗಳಿಗೆ ಎಂದಾದರೂ ಭೇಟಿ ನೀಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ, ರೈತರ ಸಮಸ್ಯೆ ವ್ಯಾಪಕವಾಗಿವೆ, ಹೀಗಾಗಿ ಅಧಿವೇಶನದ ಆರಂಭದಲ್ಲಿಯೇ ರೈತರ ವಿಷಯ ಚರ್ಚೆಯನ್ನು ಮಾಡಿ, ಪ್ರಶ್ನೋತ್ತರ ಕಲಾಪ ಬದಿಗಿರಿಸಿ ನೇರವಾಗಿಯೇ ರೈತರ ವಿಷಯ ಚರ್ಚೆಯಾಗಲಿ ಎಂದು ನಡಹಳ್ಳಿ ಒತ್ತಾಯಿಸಿದರು.
ಈ ಸರ್ಕಾರ ರೈತರಿಗೆ ಪರಿಹರ ನೀಡಬೇಕು ಇಲ್ಲವೇ ಜಾಗ ಖಾಲಿ ಮಾಡಿ ಹೊರಡಬೇಕು, ಸದನದ ಒಳಗೂ-ಹೊರಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಅಭಿವೃದ್ಧಿಗೆ ಹಣವಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಶೇ.೬೩ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಾಚಾರವಿದೆ ಎಂದು ಉಪಲೋಕಾಯುಕ್ತರೇ ಹೇಳಿದ್ದಾರೆ, ಇದೆಲ್ಲವೂ ಹಣ ಎಐಸಿಸಿಗೆ ಹೋಗುತ್ತಿದೆ, ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಎಐಸಿಸಿ ಎಟಿಎಂ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತಿದೆ ಎಂದರು.
ಎರಡೂವರೆ ವರ್ಷದಲ್ಲಿ ೪೩ ತಾಲೂಕುಗಳಲ್ಲಿ ೧೪೩೭ ಗ್ರಾಮಗಳು ಅತಿವೃಷ್ಟಿಯಿಂದ ಬಾಧಿತವಾಗಿವೆ, ಮುಖ್ಯಮಂತ್ರಿಗಳು ಕೇವಲ ಹೆಲಿಕ್ಯಾಪ್ಟರ್‌ನಲ್ಲಿ ಗಿರಕಿ ಹೊಡೆದು ಸಮೀಕ್ಷೆ ನಡೆಸಿದ್ದಾರೆ, ರಾಜ್ಯ ಸರ್ಕಾರ ಕೇವಲ ೧೪.೪೮ ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಹೇಳಿದೆ, ಆದರೆ ನಾವೇ ಸ್ವತ: ಬೆಳೆ ಹಾನಿ ಸಮೀಕ್ಷೆ ನಡೆಸಿದ್ದಾಗ ೩೮ ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿಯಾಗಿದೆ, ಆದರೆ ವಾಸ್ತವಿಕವಾಗಿ ಆಗಿರುವ ಬೆಳೆ ಹಾನಿ ಸರ್ಕಾರದ ಗಮನದಲ್ಲಿಯೇ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಈ ಸರ್ಕಾರ ಕಿತ್ತೊಗೆಯುವವರೆಗೂ ಸರ್ಕಾರಿ ಮೆಡಿಕಲ್ ಕಾಲೇಜ್ ಆಗುವುದಿಲ್ಲ, ನಮ್ಮ ಸರ್ಕಾರ ಬಂದಾಗ ಹೋರಾಟಗಾರರ ಬೇಡಿಕೆ ಈಡೇರುತ್ತದೆ ಎಂದರು.
`ಬಿಜೆಪಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಬದ್ಧವಾಗಿದೆ, ನಾನು ಈ ಹಿಂದೆಯೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೋರಾಟ ಮಾಡಿರುವೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಒಂದೇ ತಾಯಿಯ ಮಕ್ಕಳು, ಆದರೆ ಇಬ್ಬರು ಮಕ್ಕಳಿಗೂ ಸಮಾನ ಪ್ರಾಶಸ್ತ್ಯ ದೊರಕಬೇಕು, ನಮಗೆ ನ್ಯಾಯ ದೊರಕದೇ ಹೋದರೆ ನಾವು ಜಗಳವಾಡುತ್ತೇವೆ ಹೊರತು ನಾನು ಪ್ರತ್ಯೇಕ ರಾಜ್ಯಕ್ಕೆ ಎಂದೂ ಬೇಡಿಕೆ ಇರಿಸಿಲ್ಲ, ಆದರೆ ಕಾಲಾಯ: ತಸ್ಮೆೈಯೇ ನಮ: ಮುಂದೆ ಏನಾಗುತ್ತದೆಯೋ ಯಾರು ಬಲ್ಲರು? ಎಂದು ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಸಂಜಯ ಪಾಟೀಲ ಕನಮಡಿ, ಸಂದೀಪ ಪಾಟೀಲ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

