ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ 1.30 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ.
ತಾಲೂಕಿನ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವದರಿಂದ ಮುತ್ತೂರ ನಡುಗಡ್ಡೆಯಲ್ಲಿನ ಅಪ್ಪಯ್ಯನ ದೇವರಗುಡಿ, ಐದಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.
ಕೃಷ್ಣಾ ನದಿಯಲ್ಲಿ ಎರಡುವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಯುತಿದ್ದಂತೆ ನದಿ ಪಾತ್ರದ ಬಹುತೇಕ ಜನವಸತಿ ಪ್ರದೇಶಗಳು ಮುಳುಗಡೆಯಾಗುವುದು ಇಲ್ಲಿ ಸರ್ವೆ ಸಾಮಾನ್ಯವಾಗಿದೆ, ಆದರೆ ಈಗ ಮಹಾರಾಷ್ಟ್ರ ಮತ್ತು ಕರ್ನಾಟಕ ಜಲಾಶಯಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿ ಬಿಡುತ್ತಿರುವದರಿಂದ ಪ್ರವಾಹ ಸಾಧ್ಯತೆ ಇಲ್ಲ ಎಂದು ತಾಲೂಕಾಡಳಿತ ಹೇಳುತ್ತಿದೆ. ಈ ನಡುವೆಯೂ ಮಹಾಪೂರದಿಂದ ಪ್ರತಿವರ್ಷವೂ ಹಲವು ಗ್ರಾಮಗಳು ನಡುಗಡ್ಡೆಯಾಗುತ್ತಲೇ ಇವೆ.
ಯಾವ್ಯಾವ ದ್ವೀಪಗಳಾಗುತ್ತವೆ?
ಸುಮಾರು 2.5 ರಿಂದ 3.5 ಲಕ್ಷಕ್ಕೂ ಅಧಿಕ ನೀರು ಹರಿದು ಬಂದರೆ ಮುತ್ತೂರ ನಡುಗಡ್ಡೆ, ಆಲಗೂರ ಗೌಡರ ಗಡ್ಡೆ, ನರಸಗೊಂಡ ವಸ್ತಿ, ತುಬಚಿ ಕಾಸರ ನಡುಗಡ್ಡೆಗಳು ದ್ವೀಪಗಳಾಗಿ ಮಾರ್ಪಡುವದರ ಮೂಲಕ ಪ್ರವಾಹಕ್ಕೆ ತುತ್ತಾಗುತ್ತವೆ.
ಶಾಶ್ವತ ಸ್ಥಳಾಂತರಕ್ಕೆ ಹಿನ್ನಡೆ
ಶಾಶ್ವತ ನೆಲೆಗೆ ಗುರುತಿಸಿರುವ ಪ್ರದೇಶದಲ್ಲಿ ಮೂಲ ಸೌಕರ್ಯ ಇಲ್ಲದಿರುವುದು, ರೈತರ ಜಮೀನುಗಳಿಗೆ ಪರಿಹಾರ ನೀಡದೆ ಇರುವುದರ ಜೋತೆಗೆ ಮೂಲ ನೆಲೆ ತೊರೆಯಲು ಜನತೆಗೆ ಮನಸ್ಸು ಇಲ್ಲದಿರುವುದು, ಪ್ರವಾಹ ಪೀಡಿತ ಹಳ್ಳಿಗಳ ಶಾಶ್ವತ ಸ್ಥಳಾಂತರ ಹಿನ್ನಡೆಗೆ ಕಾರಣ ಎಂದು ವಿಷ್ಲೇಶಿಸಲಾಗುತ್ತಿದೆ.

110 ಎಕರೆ ಪ್ರದೇಶ ನಡುಗಡ್ಡೆ
ಮುತ್ತೂರ ನಡುಗಡ್ಡೆ ಪ್ರದೇಶ ಸುಮಾರು 110 ಎಕರೆ ಪ್ರದೇಶದಲ್ಲಿ 38 ಕುಟುಂಬಗಳು 200ಕ್ಕೂ ಅಧಿಕ ಜನರು, 223 ಜಾನುವಾರುಗಳ ಮೂಲಕ ಹೈನುಗಾರಿಕೆ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ, ಪ್ರತಿವರ್ಷ ನೇರೆ ಬಂದಾಗ ಮಾತ್ರ ಅಧಿಕಾರಿಗಳು ಬಂದು ಕರಿತಾರಿ ನಮಗ ಜೀವನ ಕಟ್ಟಿಕೊಳ್ಳಾಕ ಏನು ವ್ಯವಸ್ಥೆ ಪರಿಹಾರದ ನೆನಪ ತೆಗೆಯುದಿಲ್ಲ ಎಂದು ನಿವಾಸಿಗಳು ತಮ್ಮ ಅಳಲನ್ನು ತೊಡಿಕೊಂಡರು.