ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಒಂದು ದಟ್ಟವಾದ ಕಾಡಿನಲ್ಲಿ ಒಂದು ಸಿಂಹ ಇತ್ತು. ಅದು ತುಂಬಾ ಅಹಂಕಾರದಿಂದ ವರ್ತಿಸುತ್ತಿತ್ತು. ಕಾಡಿನ ಬೇರೆಲ್ಲ ಪ್ರಾಣಿಗಳನ್ನು ಕೀಳಾಗಿ ನೋಡುತ್ತಿತ್ತು. ಒಂದು ದಿನ ಕಾಡಿನಲ್ಲಿ ಸುತ್ತಾಡುತ್ತಿರುವಾಗ ಸಿಂಹದ ಪಂಜಕ್ಕೆ ಚೂಪಾದ ಮುಳ್ಳೊಂದು ಚುಚ್ಚಿತು. ಸಿಂಹಕ್ಕೆ ಮುಳ್ಳು ಚುಚ್ಚಿದ ನೋವಿನಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ. ಇಲಿಯೊಂದು ಸಿಂಹದ ಸ್ಥಿತಿ ಕಂಡು ಸಹಾಯ ಮಾಡಲು ಬಂದಿತು. ಆದರೆ ಸಿಂಹವು ‘ನಾನು ಕಾಡಿನ ರಾಜ ನಿನ್ನಂಥ ಸಣ್ಣ ಪ್ರಾಣಿಯಿಂದ ಸಹಾಯ ಪಡೆಯುವುದೇ?’ ಎಂದು ಸೊಕ್ಕಿನಿಂದ ಇಲಿಯ ಸಹಾಯವನ್ನು ನಿರಾಕರಿಸಿತು. ಕ್ರಮೇಣ ಅದಕ್ಕೆ ನಡೆಯಲು ಆಗದಂತಾಯಿತು. ಕಾಡಿನಲ್ಲಿ ನರಳುತ್ತಾ ಮೆಲ್ಲನೇ ಅಲೆದಾಡುತ್ತ ಸಹಾಯ ಮಾಡಲು ಯಾರಾದರೂ ಸಿಗುವರೇನೋ ಎಂದು ನೋಡುತ್ತಿತ್ತು. ಆದರೂ ಒಣ ಜಂಭ ಕಡಿಮೆ ಆಗಿರಲಿಲ್ಲ. ಆದರೆ ನೋವು ಹೆಚ್ಚಾದಂತೆ ತಡೆದುಕೊಳ್ಳಲಾರದೇ ತನ್ನ ಅಹಂಕಾರವನ್ನು ಬಿಟ್ಟು ಇಲಿಯನ್ನು ಸಹಾಯ ಮಾಡಲು ಕೇಳಿಕೊಂಡಿತು. ಇಲಿ ತನ್ನ ಚೂಪಾದ ಹಲ್ಲುಗಳಿಂದ ಸಿಂಹದ ಪಂಜದಲ್ಲಿ ಸಿಕ್ಕಿದ್ದ ಮುಳ್ಳನ್ನು ಸುಲಭವಾಗಿ ತೆಗೆದು ಹಾಕಿತು.
ದೊಡ್ಡ ಅಡೆತಡೆ
ಈ ಮೇಲಿನ ಸಿಂಹದಂತೆ ನಾವು ಬಹುತೇಕ ಸಲ ಅಹಂಕಾರದಿಂದ ವರ್ತಿಸುತ್ತೇವೆ. ನಮ್ಮನ್ನು ಕೆಳಕ್ಕೆಳೆಯುವ, ಬದುಕಿಗೆ ಮುಳ್ಳಿನಂತೆ ಚುಚ್ಚುವ ಅಹಂಕಾರವನ್ನು ಹೊಸ ವರ್ಷದ ಆರಂಭದಲ್ಲಿ ಬಿಡಬೇಕೆಂಬ ಸಂಕಲ್ಪಗಳಲ್ಲಿ ಸೇರಿಸುತ್ತೇವೆ. ಶುಭಾರಂಭದಲ್ಲಿ ಕೆಲವು ಅಭ್ಯಾಸಗಳನ್ನು ಬದಲಿಸಲು ಬಯಸುತ್ತೇವೆ. ಆ ಪಟ್ಟಿಯಲ್ಲಿ ಜಾಗ ಪಡೆಯುವಂತಹದು ಅಹಂಕಾರ. ಸ್ವಯಂ ಬೆಳವಣಿಗೆಗೆ ದೊಡ್ಡ ಅಡೆತಡೆ ಅಹಂಕಾರ. ಮೇಲ್ನೋಟಕ್ಕೆ ಸರಳವಾಗಿ ಕಾಣಿಸುವುದು. ಆದರೆ ಅದು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವಾಗ ತಡೆಗೋಡೆಯಾಗಿ ನಿಲ್ಲುವ ತಾಕತ್ತು ಹೊಂದಿರುವಂತಹದು.
ಕಾರಣಗಳು
ಸಾಮಾನ್ಯವಾಗಿ ಅಹಂಕಾರಕ್ಕೆ ಕಾರಣಗಳು ಅನೇಕ ಅವುಗಳಲ್ಲಿ ಪ್ರಮುಖವಾದುವುಗಳೆಂದರೆ: ಒಂದು ಸೌಂದರ್ಯ ಇನ್ನೊಂದು ಶ್ರೀಮಂತಿಕೆ. ಯಾವಾಗ ನಮ್ಮಲ್ಲಿ ಅಹಂಕಾರ ತುಂಬಿರುತ್ತದೆಯೋ ಆಗ ಬೇರೆಯವರ ಮಾತುಗಳು ಅಸಡ್ಡೆ ಹಾಗೂ ಅಜ್ಞಾನದಂತೆ ಕಾಣುತ್ತವೆ. ಸುಖ ಸಂಪತ್ತು ಹೆಚ್ಚಾದಷ್ಟು ಅಹಂಕಾರದ ಪ್ರಮಾಣವೂ ಹೆಚ್ಚುತ್ತ ಹೋಗುತ್ತದೆ. ಅಹಂಕಾರದಿಂದ ನಮಗೆ ಬೇರೆ ಶತ್ರುಗಳ ಕಾಟವಿಲ್ಲ. ಏಕೆಂದರೆ ನಮಗೆ ನಾವೇ ಶತ್ರುಗಳಾಗುತ್ತೇವೆ. ನಮ್ಮ ಪ್ರಗತಿಯನ್ನು ಕುಂಠಿತಗೊಳಿಸುವ ಕಾಲಡಿಯಲ್ಲಿನ ಮರಳಿನಂತಹದು ಅಹಂಕಾರ.
ಅಹಂಕಾರವನ್ನು ಇನ್ನಿಲ್ಲದಂತೆ ಮಾಡಲು ಇರುವ ಕೆಲವು ಸಲಹೆಗಳನ್ನು ನೋಡೋಣ ಬನ್ನಿ.
ತಪ್ಪು ಸ್ವೀಕರಿಸಿ
ನನಗೆ ಎಲ್ಲವೂ ಗೊತ್ತಿದೆಯೆಂಬ ತಪ್ಪು ಕಲ್ಪನೆಯಲ್ಲಿ ನಾವು ತಪ್ಪು ಮಾಡಿದಾಗ ಯಾರಾದರೂ ಅದನ್ನು ಎತ್ತಿ ತೋರಿಸಿದಾಗ, ಅದು ಆಳವಾದ ಅಪರಾಧ ಭಾವನೆಗಳನ್ನು ವಿಷಾದವನ್ನು ಮತ್ತು ಕೆಲವೊಮ್ಮೆ ನಾಚಿಕೆಯನ್ನು ಉಂಟುಮಾಡುತ್ತದೆ. ಈ ಭಾವನೆಗಳು ಹೊರಹೋದ ನಂತರ ಕೋಪವನ್ನು ಅನುಭವಿಸುತ್ತೇವೆ. ನಾನು ತಪ್ಪು ಮಾಡಿಲ್ಲ ಮಾಡುವುದೂ ಇಲ್ಲ ಎನ್ನುವ ಮನಸ್ಥಿತಿಯು ‘ನಾನು ದೋಷರಹಿತ,’ ಎಂದು ಬಲವಾಗಿ ಹೇಳುತ್ತದೆ. ತಪ್ಪು ಮಾಡಿದಾಗ ಕ್ಷಮೆ ಯಾಚಿಸಬೇಕು. ತಪ್ಪು ಮಾಡುವುದು ಸಹಜ. ತಿದ್ದಿ ನಡೆಯುವವನೇ ಮನುಜನೆಂಬ ಮಾತನ್ನು ಹಲವು ಬಾರಿ ಕೇಳಿದ ನಾವು ತಪ್ಪುಗಳು ನಮ್ಮ ಶ್ರೇಷ್ಠ ಶಿಕ್ಷಕರೆಂಬುದನ್ನು ಮರೆಯಬಾರದು. ತಪ್ಪನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಗ ಅಹಂ ದೂರ ಸರಿಯುತ್ತದೆ.

ಕೇಂದ್ರೀಕರಿಸಿ
ಕುಟುಂಬ ಸಮಾಜದ ಮೇಲೆ ಕೇಂದ್ರೀಕರಿಸಿದಾಗ ಅಹಂಕಾರ ನಗಣ್ಯವೆನಿಸುತ್ತದೆ. ಅಷ್ಟೇ ಅಲ್ಲ ಅಹಂಕಾರದಿಂದ ಪ್ರೇರಿತವಾದ ಭಾವನೆಗಳು ಅಪ್ರಸ್ತುತ ಮತ್ತು ಕ್ಷುಲ್ಲಕವೆನಿಸುವವು. ಅಧಿಕಾರ ಸಂಪತ್ತು ಹೊಂದಿರುವ ಕಾರಣಕ್ಕೆ ಅಹಂಕಾರ ಪಡಬಾರದು. ಏಕೆಂದರೆ ಚದುರಂಗದ ಆಟ ಮುಗಿದ ನಂತರ ರಾಜ ಮತ್ತು ಸೈನಿಕರನ್ನು ಒಂದೇ ಪೆಟ್ಟಿಗೆಯಲ್ಲಿ ಇಡಲಾಗುತ್ತದೆ. ಹಾಗೆಯೇ ನಮ್ಮ ಜೀವನವೂ ಕೂಡ. ನಾನೇ ನನ್ನದು ಎನ್ನುವ ಭಾವನೆಯನ್ನು ಬಿಟ್ಟಾಗಲೇ ಹೊಸದನ್ನು ಕಲಿಯಲು ಸಾಧ್ಯ. ನಾವೂ ಬೆಳೆದು ಇತರರನ್ನು ಬೆಳೆಸಲು ಸಾಧ್ಯ. ಶಾಂತಿಯುತ ಮತ್ತು ಅರ್ಥಪೂರ್ಣ ಸಂಬಂಧಗಳಿಗೆ ದಾರಿ ಮಾಡಿಕೊಡಲು ಸಾಧ್ಯ. ಏಳ್ಗೆ ಬಗ್ಗೆ ಕೇಂದ್ರೀಕರಿಸಿ ಹೊರತಾಗಿ ಹೊಗಳಿಕೆ ಬಗೆಗೆ ಅಲ್ಲ.
ಕಲ್ಪಿಸಿಕೊಳ್ಳಿ
ಬೇರೆಯವರೊಂದಿಗೆ ಸಂಘರ್ಷಕ್ಕಿಳಿದಾಗ ಅಹಂಕಾರ ಪ್ರಚೋದಿಸಲ್ಪಡುತ್ತದೆ. ಇದು ಕಿರಿಕಿರಿಯನ್ನು ಅನುಭವಿಸುವಂತೆ ಮಾಡುತ್ತದೆ. ಬೇರೆಯವರ ಕ್ರಿಯೆಗಳು ನಿಮ್ಮ ಅಹಂನ್ನು ಪ್ರಚೋದಿಸದಿರಲಿ. ವೈಯಕ್ತಿಕ ಮತ್ತು ವೃತ್ತಿಪರ ಕೆಲಸಗಳನ್ನು ಮಾಡದಂತೆ ತಡೆಯಬಹುದು. ಆದ್ದರಿಂದ ನಮ್ಮಲ್ಲಿ ಅನೇಕರು ಬೇರೆಯವರ ಸಹಾಯ ಪಡೆಯುವುದು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವುದು ಎಂದು ತಪ್ಪು ತಿಳಿದುಕೊಂಡಿರುತ್ತಾರೆ. ಬದಲಾಗಿ ನೀವು ಇತರರಿಗೆ ಪ್ರೀತಿಪಾತ್ರರಂತೆ ಆಳವಾಗಿ ಮೆಚ್ಚುವ ವ್ಯಕ್ತಿಯೆಂದು ಕಲ್ಪಿಸಿಕೊಳ್ಳಿ. ಈ ದೃಶ್ಯೀಕರಣವು ನೀವು ಅವರೊಂದಿಗೆ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸುತ್ತದೆ.

ಭಾವನೆಗಳು ಸರಿ
ಇತರರಿಗಿಂತ ಮುಂದಿರುವುದು ಶ್ರೇಷ್ಠವಲ್ಲ. ನಾಯಕತ್ವವು ನಿನ್ನೊಂದಿಗಿನ ಸ್ಪರ್ಧೆ ಬೇರೆಯವರೊಂದಿಗಲ್ಲ. ನೀನು ನಿನ್ನೆಗಿಂತ ಇಂದು ಉತ್ತಮವಾಗಿರುವುದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಇತರರು ನಿಮ್ಮನ್ನು ಕೆಣಕಿದಾಗ ಸರಳತೆ ಮಾಯವಾಗುತ್ತದೆ. ತಾನೇ ಸರಿ ಎಂಬುದು ಎದ್ದು ಕಾಣುತ್ತದೆ. ತಾನು ತಪ್ಪು ಅಂತ ಯಾರಾದರೂ ಹೇಳಿದರೆ ಅಸಾಧ್ಯ ಕೋಪ ಬರುತ್ತದೆ. ಎಲ್ಲಾ ಭಾವನೆಗಳು ಸರಿ ಆದರೆ ಎಲ್ಲಾ ನಡವಳಿಕೆಗಳು ಸರಿಯಲ್ಲ. ನೀನು ಯಾವಾಗಲೂ ಸರಿ ಇರುವುದಿಲ್ಲ. ಯಾವಾಗಲೂ ಎಲ್ಲವೂ ನಿನ್ನ ನಿಯಂತ್ರಣದಲ್ಲೂ ಇರುವುದಿಲ್ಲ. ನಿಯಂತ್ರಣದಲ್ಲಿ ಇಲ್ಲದಿರುವುದನ್ನು ಸ್ವೀಕರಿಸಿ. ನಿಮ್ಮ ಎದುರಿನವರು ಆಕ್ಷೇಪಾರ್ಹವಾದುದನ್ನು ಹೇಳಿದರೆಂದು ವಾದಕ್ಕಿಳಿಯಬೇಡಿ. ವಿಚಾರಮಾಡಿ ಮಾತುಗಳನ್ನಾಡಿ. ‘ಮಾತು ವರ್ತನೆಯನ್ನು ಹೇಳುತ್ತದೆ. ವಾದ ಜ್ಞಾನವನ್ನು ಎತ್ತಿ ತೋರಿಸುತ್ತದೆ. ಅಹಂಕಾರ ಅವನ ಬಳಿ ಇರುವ ಹಣ ಎಷ್ಟು ಎಂಬುದನ್ನು ಹೇಳುತ್ತದೆ. ಅವನ ಮನೆತನ ಎಂಥದು ಎಂಬುದನ್ನು ಅವನ ಸಂಸ್ಕಾರ ಹೇಳುತ್ತದೆ.’ ಇಡೀ ಜಗವನ್ನೇ ಗೆಲ್ಲಬಹುದು ಸಂಸ್ಕಾರ ಒಂದಿದ್ದರೆ. ಗೆದ್ದ ಜಗತ್ತನ್ನು ಸೋಲಬಹುದು ಅಹಂಕಾರವಿದ್ದರೆ. ಹೀಗಾಗಿ ಅಹಂಕಾರದಿಂದ ದೂರವಿರುವುದೇ ಕ್ಷೇಮ.
ಪ್ರತಿಸ್ಪಂದಿಸಿ
ಭಾವನಾತ್ಮಕ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುವುದು ಸುಲಭ. ವಿಶೇಷವಾಗಿ ಅದು ನಕಾರಾತ್ಮಕವಾಗಿದ್ದರೆ ಇತರರಿಂದ ಆಕ್ರಮಣಶೀಲತೆ, ಪ್ರಾಬಲ್ಯ, ಗೂಂಡಾಗಿರಿ ಇಲ್ಲವೇ ಅಸಭ್ಯ ವರ್ತನೆಯನ್ನು ಎದುರಿಸಿದಾಗ ನೀವು ಅನುಭವಿಸುತ್ತಿರುವ ಭಾವನೆಯನ್ನು ಗುರುತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಯಾವಾಗಲೂ ನೀನು ಗೆಲ್ಲಲು ಆಗುವುದಿಲ್ಲ. ಆದರೆ ಗೆಲುವು ನಿನ್ನ ಸ್ವ-ಯೋಗ್ಯತೆಗೆ ಕೆಟ್ಟ ಪರಿಣಾಮ ಬೀರಬಾರದು. ಆ ಕ್ಷಣದಲ್ಲಿ ತಕ್ಷಣವೇ ಪ್ರತಿಕ್ರಿಯಿಸುವ ಬದಲು ಸಾವಧಾನದಿಂದ ಪರಿಸ್ಥಿತಿಗೆ ಉತ್ತಮ ಪ್ರತಿಕ್ರಿಯೆಯನ್ನು ನಿರ್ಧರಿಸಿ. ಅಹಂಕಾರಕ್ಕೆ ಬಲಿಯಾಗಿ ಪ್ರತಿಕ್ರಿಯಿಸದೇ ತಾಳ್ಮೆಯಿಂದ ಪ್ರತಿಸ್ಪಂದಿಸಿ. ಪ್ರತಿಸ್ಪಂದಿಸಿದಾಗ ವ್ಯಕ್ತಿತ್ವ ಮಿಂಚಿನಂತೆ ಮಿನುಗುತ್ತದೆ.
ಕೊನೆಹನಿ
ಅಹಂ ನಮ್ಮ ಸ್ವ-ಪ್ರಾಮುಖ್ಯತೆಯ ಭಾವನೆಗಳಿಗೆ ಮತ್ತು ಸ್ವಯಂ ಅರಿವಿಗೆ ಕೊಡುಗೆ ನೀಡುತ್ತದೆ, ಆದಾಗ್ಯೂ ಕೆಲವೊಮ್ಮೆ ನಮ್ಮ ಗುರಿಯ ದಾರಿಯಲ್ಲಿ ಅಡ್ಡವಾಗಿ ನಿಲ್ಲಬಹುದು. ಅಂದರೆ ಅಹಂಕಾರವು ಸ್ವ-ಪ್ರಾಮುಖ್ಯತೆಗೆ ಇಂಬು ನೀಡುತ್ತದೆ. ಬೇರೆಯವರ ಪ್ರಾಮುಖ್ಯತೆಗಳನ್ನು ಕೆಳಕ್ಕೆ ತಳ್ಳುತ್ತದೆ. ‘ಮನಸ್ಸಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ, ಏಕೆಂದರೆ ಅಲ್ಲಿ ನಾನು, ನನ್ನಿಂದಲೇ ಎಂದು ಹೇಳಿದ ಎಷ್ಟೋ ಜನ ಮಣ್ಣಾಗಿರುವರು ಕಾಣ ಸಿಗುವರು.’ ಬೀಚಿಯವರು ಹೇಳಿದಂತೆ ‘ಮನುಷ್ಯ ಬಹಳ ವಿಚಿತ್ರ ಅವನಿಗೆ ತನ್ನ ಜ್ಞಾನದ ಬಗ್ಗೆ ಅಹಂಕಾರವಿದೆ ಆದರೆ ತನ್ನ ಅಹಂಕಾರದ ಬಗ್ಗೆ ಜ್ಞಾನವಿಲ್ಲ. ‘ನಮ್ಮ ವ್ಯಕ್ತಿತ್ವ ರಾಜನಂತಿರಬೇಕು. ಅಹಂಕಾರ ಸೇವಕನಂತಿರಬೇಕು. ಬದುಕಿಗೆ ಮುಳ್ಳಾದ ಅಹಂಕಾರವನ್ನು ಮುರಿದಾಗ ಮಾತ್ರ ಯಶಸ್ಸಿನ ಸಾಮ್ರಾಜ್ಯವನ್ನು ಕಟ್ಟಬಲ್ಲೆವು. ಅಲ್ಲಿಯೇ ಬಹು ಕಾಲ ಉಳಿಯಬಲ್ಲೆವು.


