ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿ ಮಾಡುವಂತೆ ಆಗ್ರಹಿಸಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮನವಿ ಸ್ವೀಕರಿಸಲು ತಡವಾಗಿ ಬಂದ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನಿಸಿದ ವಿದ್ಯಾರ್ಥಿಗಳು, ನಂತರ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಕಳೆದ ೫-೬ ವರ್ಷಗಳಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಜೊತೆಗೆ ನಿಲ್ಲಬೇಕಾದ ಸರ್ಕಾರ ಕುಂಭನಿದ್ರೆಗೆ ಜಾರಿದೆ. ಸರಕಾರದ ಹತ್ತಿರ ಯಾವುದೇ ದೂರದೃಷ್ಟಿಯ ಯೋಜನೆಗಳು ಇಲ್ಲದೆ ಸಮಸ್ಯೆಗಳು ಬಂದಾಗ ಅವುಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನ ಮಾಡಿಕೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಾತಿಗಳನ್ನು ಮಾಡದೆ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ, ರಾಜ್ಯದಲ್ಲಿ ಒಟ್ಟು ೪೩ ಇಲಾಖೆಗಳಲ್ಲಿ ೨ ೮೪,೮೮೧ ಹುದ್ದೆಗಳು ಖಾಲಿ ಇದೆ, ಲಕ್ಷಾಂತರ ಅಭ್ಯರ್ಥಿಗಳು ಕಳೆದ ಐದಾರು ವರ್ಷಗಳಿಂದ ಸರ್ಕಾರ ನೇಮಕಾತಿಗಳನ್ನ ಮಾಡುತ್ತೆ ಎಂಬ ನಂಬಿಕೆಯೊಂದಿಗೆ ಪ್ರತಿ ತಿಂಗಳು ಹಣವನ್ನು ಖರ್ಚು ಮಾಡಿಕೊಂಡು ತರಬೇತಿಯನ್ನು ಪಡೆಯುತ್ತಾ ಸರಕಾರಿ ಸೇವೆಯನ್ನು ಮಾಡಬೇಕು ಆಸೆಯನ್ನು ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಅಂತಹ ಸಾವಿರಾರು ಅಭ್ಯರ್ಥಿಗಳ ವಯಸ್ಸು ಕೂಡಾ ಮೀರುತ್ತಿದೆ, ಆದರೆ ಸರಕಾರಕ್ಕೆ ಈ ಯಾವುದೇ ತೊಂದರೆಗಳನ್ನು ಗಮನಿಸದೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು.
ಎಬಿವಿಪಿಯ ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ೭೯,೬೯೪ ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲೂ೧೩,೫೯೯ ಹುದ್ದೆಗಳು ಖಾಲಿ ಇದ್ದು ಇದರಿಂದ ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ, ಸರ್ವರಿಗೂ ಶಿಕ್ಷಣವನ್ನು ನೀಡಬೇಕಾದದ್ದು ಸರಕಾರಗಳ ಕರ್ತವ್ಯ ಆದರೆ ಸರಕಾರಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸರಕಾರ ಅನ್ಯಾಯ ಮಾಡುತ್ತಿದೆ ಎಂದರು.
ಎಬಿವಿಪಿಯ ಕಾನೂನು ವಿದ್ಯಾರ್ಥಿಗಳ ಪ್ರಮುಖ ಮಂಜುನಾಥ ಹಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಶಶಿಕಾಂತ ರಾಕ್ಲೆ, ಚೇತನ ಕೋರವಾರ, ದುಂಡಪ್ಪ ನಿಲೋಗಿ, ಬಾಲಾಜಿ ಬಿರಾದಾರ, ಬಸನಗೌಡ ಕೋನರಡ್ಡಿ,ಕಾರ್ತಿಕ ಬಿರಾದಾರ, ಅಜಯ, ಶಿಲ್ಪಾ ಪೂಜಾರಿ, ನಿಖಿತಾ ರೂಡಿ, ಅಜಯ ಸೋಲಂಕಿ, ಶಶಿಕುಮಾರ ಪಾಟೀಲ, ಸಾಯಿ ಬಿರಾದಾರ, ಇತರರು ಭಾಗವಹಿಸಿದ್ದರು.

