ಕನ್ನಡ ಜಾನಪದ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷ ಅಭಿನವ ಮುರುಗೇಂದ್ರ ಶಿವಾಚಾರ್ಯರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು
ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ ಎಂದು ಕನ್ನಡ ಜಾನಪದ ಪರಿಷತ್ತಿನ ತಾಲೂಕ ಗೌರವಾಧ್ಯಕ್ಷ ಅಭಿನವ ಮುರುಗೇಂದ್ರ ಶಿವಾಚಾರ್ಯರು ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ಇಂಡಿ ಘಟಕದ ವತಿಯಿಂದ ಹಮ್ಮಿಕೊಂಡ “ವಿಶ್ವ ಜಾನಪದ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆಗಳು ಗ್ರಾಮೀಣ ಜನರ ಜೀವನ ವಿಧಾನ, ನಂಬಿಕೆ, ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಅವು
ಮನರಂಜನೆ ನೀಡುವ ಜತೆಗೆ ಸಾಮಾಜಿಕ ಬಾಂಧವ್ಯವನ್ನು ವೃದ್ಧಿಗೊಳಿಸಿ, ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಪರಂಪರೆಯನ್ನು ಕೊಂಡೊಯ್ಯುತ್ತವೆ ಎಂದು ಹೇಳಿದರು.
ಉಪನ್ಯಾಸ ನೀಡಿ ಮಾತನಾಡಿದ ಶಿಕ್ಷಕ ಸಂತೋಷ ಬಂಡೆ, ನಮ್ಮ ಸನಾತನ ಜನಪದ ಕಲೆಯು ಗ್ರಾಮೀಣ ಸಂಸ್ಕೃತಿ, ಪರಂಪರೆಯ ಪ್ರತೀಕ. ಗ್ರಾಮೀಣ ಜನರ ದೈನಂದಿನ ಬದುಕಿನಲ್ಲಿ ಜನಪದ ಕಲೆ ಹಾಸುಹೊಕ್ಕಾಗಿದೆ. ಸಾಹಿತ್ಯ ಮತ್ತು ಕಲೆಗಳ ಮೂಲ ಬೇರುಗಳು ಜಾನಪದದಲ್ಲಿವೆ. ಆದ್ದರಿಂದ ಇಂದಿನ ಮಕ್ಕಳು ಆಧುನಿಕ ಅಬ್ಬರಗಳಿಗೆ ಮಾರುಹೋಗದೆ ಜನಪದ ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಪಂಡಿತ ಅವಜಿ ಮಾತನಾಡಿ, ಸಮೃದ್ಧ ಬದುಕಿಗೆ ಮನುಷ್ಯ ಸಂಬಂಧ, ಪ್ರೀತಿ, ವಾತ್ಸಲ್ಯ, ಉತ್ಸಾಹ ಬೇಕು. ಇಂತಹ ಉತ್ಸಾಹದ ಬದುಕನ್ನು ಜಾನಪದ ಸಾಹಿತ್ಯ ನಮಗೆ ನೀಡುತ್ತದೆ. ಬದುಕಿನ ಜೀವಸೆಲೆಯಾಗಿರುವ ಜನಪದ ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನು ಅರಿತು ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ಕಲೆಗಳು ಸಮಾಜದ ಸಾಂಸ್ಕೃತಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವವಾಗಿದ್ದು, ಅವನ್ನು ಸಂರಕ್ಷಿಸಿ, ಉತ್ತೇಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ವ್ಹಿ ವೈ ಪತ್ತಾರ, ಎಸ್ ಎಸ್ ಅರಬ ಹಾಗೂ ಶಾಲಾ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಸಾಗರ ಮಾನೆ ತಂಡದಿಂದ ಜಾನಪದ ಕಾರ್ಯಕ್ರಮಗಳು ಜರುಗಿದವು. ತಾಲೂಕ ಕಜಾಪ ಪ್ರಧಾನ ಕಾರ್ಯದರ್ಶಿ ಜಟ್ಟಪ್ಪ ಮಾದರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸಾವಿತ್ರಿ ಸಂಗಮದ ಸ್ವಾಗತಿಸಿದರು. ಶಿಕ್ಷಕಿ ಎಸ್ ಡಿ ಬಿರಾದಾರ ವಂದಿಸಿದರು.