ಲೇಖನ
– ರಶ್ಮಿ ಕೆ. ವಿಶ್ವನಾಥ್ ಮೈಸೂರು
ಉದಯರಶ್ಮಿ ದಿನಪತ್ರಿಕೆ
“ಬಾವಿಯಲ್ಲಿ ನೀರು ಸೇದಲು ಕಟ್ಟಿದ ಬಿಂದಿಗೆ ಒಳಗೆ ಹೋಗುವಾಗ ಅದು ಖಾಲಿ ಇರುವ ಕಾರಣ ಮತ್ತು ಗುರುತ್ವಾಕರ್ಷಣೆಯ ಕಾರಣದಿಂದ, ಬಿಟ್ಟ ತಕ್ಷಣ ಹೋಗಿಬಿಡುತ್ತದೆ. ಮೇಲೆ ಬರುವಾಗ ನೀರು ತುಂಬಿರುತ್ತದೆ ಜೊತೆಗೆ ಮೇಲಕ್ಕೆ ಬರಬೇಕು ಆದ ಕಾರಣ ನಿಧಾನವಾಗಿ ಬರುತ್ತದೆ” ಇದನ್ನು ಹೆಣ್ಣು ತವರು ಮನೆಗೆ ಹೋಗಿಬರುವುದಕ್ಕೆ ಹೋಲಿಸಲಾಗುತ್ತದೆ.

ಹಾಗೆಯೇ ಬೆಳಗೆದ್ದು ಕೆಲಸಕ್ಕೆ ಹೋಗುವಾಗ ಲೇಟಾಗುತ್ತದೆ ಎಂಬ ಒತ್ತಡದಲ್ಲಿ ಸಾಧ್ಯವಾದಷ್ಟು ಬೇಗ ಗಾಡಿ ಓಡಿಸಿಕೊಂಡು ಹೋಗುತ್ತೇವೆ. ವಾಪಸ್ಸು ಬರುವಾಗ ಆರಾಮವಾಗಿ ಬರುತ್ತೇವೆ.
ಅಂದು ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದೆ. ಸಿಗ್ನಲ್ ಕೆಂಪು ಲೈಟ್ ಬಂದಿದ್ದರಿಂದ ಅಲ್ಲಿಯೇ ನಿಲ್ಲಿಸಿದೆ. ನನ್ನ ಪಕ್ಕದಲ್ಲೇ ಒಂದು ಬೈಕ್, ಸಿಗ್ನಲ್ ದಾಟಿ ಜೋರಾಗಿ ಹೊರಟುಹೋಯಿತು. ತಕ್ಷಣ ಜೋರಾದ ಕೂಗು ಕೇಳಿಸಿದ್ದರಿಂದ, ಭಯ ಆಯಿತು ‘ನಾ ಏನಾದ್ರು ತಪ್ಪು ಮಾಡಿದೆನಾ? ಸಿಗ್ನಲ್ ದಾಟಿದ್ದರೆ ಅದು ತಪ್ಪು ಬಟ್ ನಾ ದಾಟಿಲ್ಲವಲ್ಲ’. ಏನಾಯ್ತು? ಶಬ್ದ ಬಂದ ಕಡೆ ತಿರುಗಿ ನೋಡಿದೆ. ರಸ್ತೆಯ ಬದಿಯಲ್ಲಿ ನಿಂತಿದ್ದ ತೃತೀಯ ಲಿಂಗಿಗಳೆಂದು ಕರೆಸಿಕೊಳ್ಳುವ ಇಬ್ಬರು ಕೂಗಿ ಹೇಳಿದರು “ಅವ ಇನ್ನೇನೋ ನಿಮಗೆ ಹೊಡೆದೇ ಬಿಟ್ಟ ಎಂದುಕೊಂಡ್ವಿ, ಅಷ್ಟರಲ್ಲೇ ಜಸ್ಟ್ ನಿಮ್ಮ ಪಕ್ಕಕ್ಕೆ ಗಾಡಿ ಕ್ರಾಸ್ ಮಾಡಿಕೊಂಡು ಹೊರಟುಹೋದ”. ಅವರು ಹೇಳಿದ ಮೇಲೆಯೇ ನನಗೂ ತಿಳಿದದ್ದು. ನನ್ನ ಹಿಂದೆಯೇ ಬರುತ್ತಿದ್ದ ಅವರು, ನಾನೂ ಸಹ ಸಿಗ್ನಲ್ ಕ್ರಾಸ್ ಮಾಡುತ್ತೇನೆ ಎಂದುಕೊಂಡಿದ್ದಾರೆ. ಆದರೆ ನಾನು ಸಿಗ್ನಲ್ ನಲ್ಲೇ ನಿಂತುಬಿಟ್ಟಿದ್ದರಿಂದ, ಅವರ ಗಾಡಿಯನ್ನು ಹೇಗೋ ಸ್ವಲ್ಪ ನಿಯಂತ್ರಣಕ್ಕೆ ತೆಗೆದುಕೊಂಡು ಪಕ್ಕಕ್ಕೆ ಚಲಿಸಿ ಹೋಗಿಬಿಟ್ಟರು. ‘ ಇಲ್ಲದಿದ್ದರೆ?’ ಅದು ನೆನಸಿಕೊಂಡೇ ಭಯ ಆಯಿತು. ಸಧ್ಯ ‘ಏನೂ ಆಗಲಿಲ್ಲವಲ್ಲ’ ಸಮಾಧಾನ ಮಾಡಿಕೊಂಡೆ.
ಮತ್ತೊಮ್ಮೆ ಡ್ಯೂಟಿಗೆ ಹೋಗುವಾಗ, ನಾ ಅಲ್ಲಿಗೆ ಬರುವುದಕ್ಕೂ ರೆಡ್ ಲೈಟ್ ಬರುವುದಕ್ಕೂ ಒಂದೇ ಆಯಿತು. ಮತ್ತೆ ಕನ್ಫ್ಯೂಷನ್. ಆದರೆ ಅದು ಕನ್ಫ್ಯೂಸ್ ಮಾಡಿಕೊಳ್ಳುವುದಕ್ಕೂ ಸಹ ಸಮಯವಿಲ್ಲದ ಸಮಯ. ’99’ ಸೆಕೆಂಡ್ಸ್ ಕೌಂಟ್ ಡೌನ್ ಶುರು. ‘ಹೋದರೂ ಆಕ್ಸಿಡೆಂಟ್ ಆಗುವ ಸಾಧ್ಯತೆ ಇರುತ್ತದೆ. ನಿಂತರೂ ಸಹ ಆಗಬಹುದು. ಆದರೆ ನಿಂತು ರೂಲ್ಸ್ ಪಾಲಿಸುವುದರಿಂದ ಮುಂದಿನ ಸಿಗ್ನಲ್ ಜನರಿಗೆ ತೊಂದರೆಯಾಗುವುದಿಲ್ಲ. ಬಟ್ ಇವತ್ತು ಮೊದಲೇ ಲೇಟ್ ಆಗಿದೆ. ಈ ಸಿಗ್ನಲ್ ನಿಂದಾಗಿ ಗ್ಯಾರಂಟಿ ತಡವಾಗುತ್ತದೆ. ಪರವಾಗಿಲ್ಲ ಮತ್ತೇನು ಮಾಡುವುದು?’
ಮನದೊಳಗೇ ಮಾತನಾಡಿಕೊಳ್ಳುತ್ತಾ ನಿಂತು, ಸಿಗ್ನಲ್ ಬಿಟ್ಟ ತಕ್ಷಣ ಹೊರಟೆ ಅಂತು ಇಂತು 1 ನಿಮಿಷ ತಡವಾಯಿತು.
ಇದು ನನ್ನೊಬ್ಬಳ ಕಥೆಯಲ್ಲ. ಈ ರೀತಿಯ ಪರಿಸ್ಥಿತಿಗಳು ತುಂಬಾ ಜನಕ್ಕೆ ಎದುರಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬ ಗೊಂದಲ. ಅಲ್ಲಿ ಯೋಚಿಸಲು ಸಹ ಸಮಯವಿರುವುದಿಲ್ಲ.
ಜೀವನ ಯಾತ್ರೆಯಲ್ಲಿಯೂ ಕೆಲವು ಇದಕ್ಕಿಂತಲೂ ಕ್ಲಿಷ್ಟ ಗೊಂದಲಗಳು ಎದುರಾಗುತ್ತವೆ. ಎಂತಹುದೇ ಸಂದರ್ಭಗಳು ಎದುರಾದರು ಸಹ, ‘ನೇರ, ಪ್ರಾಮಾಣಿಕ, ನಿಷ್ಠುರ ವ್ಯಕ್ತಿಯಾಗಿದ್ದುಬಿಡಬೇಕಾ?’ ಇಲ್ಲ ಡಿವಿಜಿಯವರ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬಂತೆ. ಯಾರು ಹೇಗೇಗೆ ಇರುತ್ತಾರೋ ಹಾಗೆಯೇ ನಾವೂ ಉದ್ದುಬಿಡಬೇಕಾ?’ ಈ ಗೊಂದಲಗಳೂ ಸಹ ಕಾಡದೆ ಇರದು. ‘Actually ಹೇಳಬೇಕೆಂದರೆ, ನಮ್ಮತನವನ್ನು ಉಳಿಸಿಕೊಂಡೇ ಇತರರೊಂದಿಗೆ ಬೆರೆಯುವ ಪ್ರಯತ್ನ ಮಾಡಬೇಕು’ ಆದರೆ ಅದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಚಾಣಾಕ್ಷಿಗಳು ಹೇಗೋ ಸಂಭಾಳಿಸಿಬಿತ್ತಾರೆ, ಆದರೆ ಅಷ್ಟೇನು ಮಾತಿನ ಚಾಣಾಕ್ಷತೆ ಇಲ್ಲದ ಕೆಲವು ಸುಜನಮತಿಗಳು ಅಥವಾ ಸ್ವಾಭಿಮಾನಿಗಳಿಗೆ ಅದು ಕಷ್ಟದ ಕೆಲಸವೆ.
ಕೊನೆಗೂ ಬರಹ ಕೊನೆಯಾಗುವುದು ಪರಿಹಾರ ಸಿಗದ ಗೊಂದಲದ ಪ್ರಶ್ನೆಯಲ್ಲಿಯೆ.
