ವಿಜಯಪುರದಲ್ಲಿ ನಡೆದ ವಿವಿಧ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಓ ರಿಷಿ ಆನಂದ್ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಗತಿಯನ್ನು ಗುರಿಯಾಗಿಟ್ಟುಕೊಳ್ಳದೇ ಎಲ್ಲರೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಮನ್ವಯದಿಂದ ಹಾಗೂ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ನಗರದ ಜಿಲ್ಲಾ ಪಂಚಾಯತಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ವಿಡಿಯೋ ಸಂವಾದದ ಮೂಲಕ ಆಯೋಜಿಸಲಾದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಮನರೇಗಾ, ಸ್ವಚ್ಚ ಭಾರತ ಮಿಷನ್ ಮತ್ತು ವಸತಿ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿ ನಿಯಮಾನುಸಾರ ಪ್ರಗತಿ ಸಾಧಿಸಬೇಕು ಎಂದರು.
ತಾಲೂಕಾ ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಿಸಿದ ವಿಭಾಗದ ಸಹಾಯಕ ನಿರ್ದೇಶಕರು ಸತತ ಕ್ಷೇತ್ರ ಭೇಟಿ ನೀಡಿ ಸಮರ್ಪಕ ಹಾಗೂ ನಿಗದಿತ ಕಾಲಾವಧಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು, ಅಗತ್ಯ ಸಲಹೆ ಸೂಚನೆ ನೀಡಬೇಕು. ಜಿಲ್ಲಾದ್ಯಂತ ಮಳೆಯಾಗುತ್ತಿರುವುದರಿಂದ ಮಳೆ ನೀರು ಹಾಗೂ ಕಲುಷಿತ ನೀರು ಕುಡಿಯುವ ನೀರಿನೊಡನೆ ಸೇರದಂತೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವುದು ಮತ್ತು ಸ್ವಚ್ಛಗೊಳಿಸಿರುವ ಕುರಿತಾಗಿ ಲಾಗ್ ವಹಿಯನ್ನು ನಿರ್ವಹಣೆ ಮಾಡಬೇಕು. ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರಿನ ಜಲಮೂಲಗಳ ಪರೀಕ್ಷೆ ಮಾಡಬೇಕು. ಕುಡಿಯುವ ನೀರಿನ ಮೂಲಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳು ವಿಜಯಕುಮಾರ ಆಜೂರ, ಮುಖ್ಯ ಲೆಕ್ಕಾಧಿಕಾರಿಗಳ ರಾಮಣ್ಣ ಅಥಣಿ ಮತ್ತು ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಸಭೆಗೆ ಎಲ್ಲಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

