ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶತಮಾನ ಕಂಡ ಉರ್ದು ಶಾಲೆಯನ್ನು, ಶಿಕ್ಷಣ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡದೇ ಏಕಾಏಕಿ ಸ್ಥಳಾಂತರಿಸಿರುವದನ್ನು ವಿರೋಧಿಸಿ ಆ.೬ ರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುಕೊಳ್ಳುತ್ತಿರುವದಾಗಿ ರಾಜ್ಯ ಮುಸ್ಲಿಂ ಕೌನ್ಸಿಲ್ ಮತ್ತು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ನಗರದ ಮಧ್ಯ ಭಾಗದಲ್ಲಿ ಶತಮಾನದಿಂದ ನಡೆದುಕೊಂಡ ಬಂದಿರುವ ಉರ್ದು ಶಾಲೆ ಸುಮಾರು ೧೨೫ ವರ್ಷಕ್ಕಿಂತ ಮೇಲ್ಪಟ್ಟಿರುವ ಶಾಲೆಯಾಗಿದೆ. ಈ ಹಿಂದೆ ಶಾಲೆ ಆರಂಭಿಸಿ ಶಿಕ್ಷಕರು ನಿವೃತ್ತಿ ಆದ ನಂತರ ಎಲ್ಪಿಎಸ್ ಶಾಲೆ ಡೈಸ್ ಕೋಡ್ ನೆಪದಲ್ಲಿ ಬಂದು ಮಾಡಲಾಗಿದೆ. ಈಗ ಶಾಲೆ ಪುರಸಭೆಗೆ ಹಸ್ತಾಂತರಿಸುವ ಕುತಂತ್ರ ತೆರೆಯ ಮರೆಯಲ್ಲಿ ನಡೆಯುತ್ತಿದೆ. ಇದು ನಮ್ಮ ಆಕ್ರೋಷಕ್ಕೆ ಕಾರಣವಾಗಿದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘಟನೆ ತಿಳಿಸಿದೆ. ಸಾರ್ವಜನಿಕರಿಗೆ ಮಾಹಿತಿ ನೀಡದೇ ಈ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯ ಕಾರ್ಯ ಆಗಿದೆ. ಮುಂಚೆ ಅನೇಕ ಬಾರಿ ಸಂಬAದಪಟ್ಟ ಅಧಿಕಾರಿಗಳ ಇಲಾಖೆಗಳಿಗೆ ಮನವಿ ಪತ್ರಗಳನ್ನು ನೀಡಿದರು ಸಹ ಇಲ್ಲಿವರೆಗೆ ಶಾಲೆ ಆರಂಭಿಸದೆ ಇರುವದು ದುರದೃಷ್ಟಕರ. ಕಾರಣ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಮತ್ತು ಉರ್ದು ಶಾಲೆಯ ಹಳೆಯ ವಿದ್ಯಾರ್ಥಿಗಳು ಖಂಡಿಸಿ, ಈ ಶಾಲೆ ಪುನಃ ಸ್ಥಾಪಿಸಿ ಶಾಲೆಯನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಬುಧವಾರದಿಂದ ಧರಣಿ ಉಪವಾಸ ಸತ್ಯಾಗ್ರಹ ಆರಂಭಿಸಲಿರುವದಾಗಿ ಪ್ರಕಟಣೆ ತಿಳಿಸಿದೆ.
