ಜಮಖಂಡಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆ ನೀಡಿದ್ದಾರೆ. ಅವುಗಳ ಪ್ರಯೋಜನವನ್ನು ಎಲ್ಲ ಮಹಿಳೆಯರು ಪಡೆದುಕೊಳ್ಳಬೇಕು ಎಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಹೇಳಿದರು.
ಶಾಸಕ ಜಗದೀಶ ಗುಡಗುಂಟಿ ಅವರ ಗೃಹ ಕಚೇರಿಯ ಸಾಕ್ಷಾತ್ಕಾರ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರ ಸುರಕ್ಷತೆ, ಭದ್ರತೆ ಕುರಿತು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ನಗರಸಭೆ, ಮಹಾನಗರ ಪಾಲಿಕೆ ಸದಸ್ಯೆಯರ ಜೊತೆ ಈಗಾಗಲೇ ಸಭೆ ನಡೆಸಿ, ಹೋರಾಟದ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಷಯದಲ್ಲಿ ರಾಜಕಿಯೇತರ ಸಂಘಟನೆಗಳಿಂದಲೂ ಹೋರಾಟ ನಡೆಯಬೇಕು ಎಂದರು.
ಅತ್ಯಾಚಾರ ಪ್ರಕರಣಗಳು ನಡೆದರೆ ದೊಡ್ಡ ನಗರಗಳಲ್ಲಿ ಇದು ಸಾಮಾನ್ಯ ಎಂದು ಗೃಹ ಸಚಿವರು ಹೇಳುತ್ತಾರೆ. ಹಾಗಾದರೆ ಮಹಿಳಾ ಸುರಕ್ಷತೆಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಶಕ್ತಿ ಯೋಜನೆಯನ್ನು ಅವೈಜ್ಞಾನಿಕವಾಗಿ ರೂಪಿಸಲಾಗಿದೆ. ಈ ಯೋಜನೆಯಿಂದ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಅನುಕೂಲಕ್ಕಿಂತ ಅನಾನೂಕೂಲ ಹೆಚ್ಚಾಗುತ್ತಿದೆ. ಯೋಜನೆಯನ್ನು ಸರ್ಕಾರ ಪರಿಷ್ಕರಿಸಬೇಕು. ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಹೆಚ್ಚು ಬಸ್ ಸೌಲಭ್ಯ ಕಲಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಲ್ಲ, ಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದ ಬಳಿ ಹಣ ಇಲ್ಲ, ಗ್ಯಾರಂಟಿ ಯೋಜನೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಹಣಕಾಸಿನ ಪೂರ್ವ ಯೋಜನೆಗಳ ಇಲ್ಲದ್ದರಿಂದ ಸರ್ಕಾರದ ಬಳಿ ಹಣ ಇಲ್ಲ ಎಂದರು.
ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿದರು. ಗೀತಾ ಸೂರ್ಯವಂಶಿ, ಕಾಶಿಬಾಯಿ ಹೂಗಾರ, ಪೂಜಾ ವಾಲ್ವೇಕರ ಇದ್ದರು.ರಾಜಶ್ರೀ ಹಿರೇಮಠ ಸ್ವಾಗತಿಸಿದರು. ಭಾರತಿ ಕಡಕೋಳ ನಿರೂಪಿಸಿದರು. ಸೂಜಾತಾ ಸಾರವಾಡ ವಂದಿಸಿದರು.

