ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ‘ಕಸ ಕಂಡರೆ ಕ್ಯೂಆರ್ ಕೋಡ್‌ಗೆ ಫೋಟೋ ಕಳಿಸಿ’ ನೂತನ ಅಭಿಯಾನಕ್ಕೆ ಎಲ್ಲರೂ ಸ್ಪಂದಿಸಿ ಪಟ್ಟಣದ ಸ್ವಚ್ಛತೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಹೇಳಿದರು.
ಪಟ್ಟಣದ ಪಂಚಾಯಿತಿ ಆವರಣದಲ್ಲಿ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆಗಾಗಿ ಪೌರಕಾರ್ಮಿಕರು ಈಗಾಗಲೇ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅದಾಗ್ಯೂ ಕಸ ವಿಲೇವಾರಿ ಕುರಿತು ಆಗಾಗ ದೂರುಗಳು ಬರುವ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಈ ವಿನೂತನ ಅಭಿಯಾನ ಆರಂಭಗೊಂಡಿದೆ.
ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಪಟ್ಟಣ ಪಂಚಾಯತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಪಟ್ಟಣದಲ್ಲಿ ಕಸ ವಿಲೇವಾರಿ ಸರಿಯಾಗಿ ಕಾರ್ಯಗತಗೊಳಿಸಿ ಸ್ವಚ್ಛ ಪರಿಸರ ನಿರ್ಮಿಬೇಕಾಗಿದೆ. ಕಸ ವಿಲೇವಾರಿ ವಾಹನ ಮನೆ ಬಾಗಿಲಿಗೆ ಬಂದಾಗ ಕಸವನ್ನು ಪೌರ ಕಾರ್ಮಿಕರ ಸಹಾಯದೊಂದಿಗೆ ವಿಲೇವಾರಿ ವಾಹನಕ್ಕೆ ರವಾನಿಸಲು ಸಾರ್ವಜನಿಕರು ಮುಂದಾಗಬೇಕು ಇದರಿಂದ ನಿಮ್ಮ ಸುತ್ತಲಿನ ವಾತಾವರಣವೂ ಶುದ್ಧವಾಗಿರುತ್ತದೆ. ಯಾವುದೇ ಕಾರಣಕ್ಕೂ ಕಸವನ್ನು ರಸ್ತೆ ಬದಿ ಎಸೆಯುವುದು ಬೇಡ ಎಂದರು.
ಅಭಿಯಾನ ಪಟ್ಟಣ ಪಂಚಾಯಿತಿಯಿಂದ ಆರಂಭಗೊಂಡು ಡಾ. ಅಂಬೇಡ್ಕರ್ ವೃತ್ತದವರೆಗೆ ತೆರಳಿ ಜಾಗೃತಿ ಮೂಡಿಸಿತು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ನಾಮನಿರ್ದೇಶಿತ ಸದಸ್ಯರಾದ ಹುಸೇನ್ ಕೊಕಟನೂರ, ಸುನೀಲ ಕನಮಡಿ, ಸಿಬ್ಬಂದಿ ಬಂದಗೀಸಾಬ್ ಮಂಡೆ, ಮುತ್ತುರಾಜ್ ಹಿರೇಮಠ, ಪ್ರವೀಣ ಹಿರೇಮಠ ಹಾಗೂ ಪೌರಕಾರ್ಮಿಕರು ಇದ್ದರು.

