ಬಂಜಾರಾ ಪ್ರೌಢ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಾಂಗ ಮಾಡಿ ಗುರಿ ಸಾಧನೆ ಮಾಡಬೇಕು. ಉತ್ತಮ ಗುಣ ಮತ್ತು ನಡವಳಿಕೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಒಳ್ಳೆಯ ಹೆಸರು ಗಳಿಸಬೇಕು ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್ ಹೇಳಿದರು.
ಶನಿವಾರದಂದು ನಗರದ ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಶಾಲಾ ಸಂಸತ್ತಿನ ಚುನಾಯಿತ ವಿದ್ಯಾರ್ಥಿಗಳ ಪ್ರಮಾಣ ವಚನ ಬೋಧನೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಅಂಕ, ರ‍್ಯಾಂಕ್, ಸ್ಥಾನಮಾನ, ಬಿರುದು ಸನ್ಮಾನಗಳ ಕಡೆಗೆ ತಮ್ಮ ಶ್ರದ್ಧೆಯನ್ನು ಕೇಂದ್ರೀಕರಿಸಿ ಒತ್ತಡದ ಬದುಕಿಗೆ ಅವರನ್ನು ತಳ್ಳಿ ಬಿಡುತ್ತಾರೆ. ಶಿಕ್ಷಣ ಸ್ಥಾನಮಾನಗಳ ಜತೆಯಲ್ಲೇ ಮೌಲ್ಯಯುತ ಸಂಸ್ಕಾರಗಳನ್ನು ರೂಢಿಸಲು ಕಲಿಸಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಹೊಳಪು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯಪುರ ಕ್ಲಸ್ಟರ್-೨೪ರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎ.ಬಿರಾದಾರರವರು ಮಾತನಾಡುತ್ತ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವ ಜತೆಗೆ ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವರ್ಷಾ ಬೆಲ್ಲದ, ಐಶ್ವರ್ಯಾ ಹುಣಿಶ್ಯಾಳ, ಸುಶ್ಮೀತಾ ಚವ್ಹಾಣ್ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಎಲ್.ಚವ್ಹಾಣ್, ಎಸ್.ಎಲ್.ದೊಡಮನಿ, ಎಸ್.ಬಿ.ಒಡೆಯರ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಬಿ.ಎಸ್.ದ್ಯಾಬೇರಿ, ಆರ್.ಎನ್.ಬಡಿಗೇರ, ಎಸ್.ಎಂ.ಮಾಳಿ, ರೇಖಾ ರಜಪೂತ, ಜಿ.ವಿ.ಬಿರಾದಾರ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಾಗತವನ್ನು ಎಸ್.ಕೆ.ಶಿಂಧೆ, ನಿರೂಪಣೆ ಆರ್.ವಿ.ಭುಜಂಗನವರ ಹಾಗೂ ವಂದನಾರ್ಪಣೆಯನ್ನು ಎ.ಎಂ.ನಾಗೊಂಡ ಶಿಕ್ಷಕರು ನೆರವೇರಿಸಿದರು

