ಕನ್ನೂರ ಬಾಗದ ಗ್ರಾಮಗಳಿಗೆ ಸಮಗ್ರ ನೀರಾವರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ವ್ಯಾಪ್ತಿಯಲ್ಲಿರುವ ಕನ್ನೂರ ಹಾಗೂ ಮಡಸನಾಳ, ಕನ್ನೂರ ದರ್ಗಾ, ಕನ್ನೂರ ತಾಂಡಾ, ಕನ್ನಾಳ, ಗುಣಕಿ ಬೊಮ್ಮನಹಳ್ಳಿ, ಮಿಂಚನಾಳ ಮತ್ತು ಮಿಂಚನಾಳ ತಾಂಡಾ, ಶಿರನಾಳ, ಮಖಣಾಪೂರ ಮತ್ತು ಮಖಣಾಪೂರ ತಾಂಡಾ, ತಿಡಗುಂದಿ, ಹಾಗೂ ಡೊಮನಾಳ ಈ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಸಲುವಾಗಿ ಕೆರೆಗಳನ್ನು ನೀರು ತುಂಬಿಸುವದು ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿಯ, ಪೈಪಲೈನಿಗೆ ಜಾಕವೆಲ್ ಬಿಡುವ ಸಲುವಾಗಿ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಮಸ್ಯೆ ಹೇಳಿಕೊಂಡರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಕ್ಕಿರುವದಿಲ್ಲ ಆದ್ದರಿಂದ ಎಲ್ಲ ಗ್ರಾಮಗಳಿಗೂ ಸಮಗ್ರ ನೀರಾವರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಆಮರಣಾ ಉಪವಾಸ ಬೃಹತ್ ಪ್ರತಿಭಟನಾ ಮೆರವಣಿಗೆಯು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಆರಂಭಗೊಂಡು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಭೆಯಾಗಿ ಮಾರ್ಪಟ್ಟಿತು.
ಬೃಹತ್ ಪ್ರತಿಭಟನಾ ಮೆರವಣಿಗೆ ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಕನ್ನೂರ ಗುರು ಮಠದ ಶ್ರೀ ಸೋಮನಾಥ ಶಿವಾಚಾರ್ಯರು ಮಾತನಾಡಿ, ನಮ್ಮೆಲ್ಲ ರೈತರು ನೀರಿಗಾಗಿ ಸಾಕಷ್ಟು ಮನವಿಯನ್ನು ಸಲ್ಲಿಸಿದರೂ, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸಿಲ್ಲ. ರೇವಣಸಿದ್ಧೇಶ್ವರ ಏತ ನೀರಾವರಿ ಆಗಬೇಕು ಎನ್ನುವ ಸಂದರ್ಭದಲ್ಲಿ ಕನ್ನೂರು, ಮಡಸನಾಳ ಸೇರಿದಂತೆ 14 ಗ್ರಾಮಗಳಿಗೆ ನೀರಿನ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಸಾಕಷ್ಟು ರೈತರು ನೀರಾವರಿ ವ್ಯವಸ್ಥೆ ಇಲ್ಲದೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇವಣಸಿದ್ದೇಶ್ವ ಏತ ನೀರಾವರಿ ಕಾಮಗಾರಿಯಲ್ಲಿ ನಮಗೆ ಜಾಕವಾಲ್ ಕೊಡುವ ಮೂಲಕ ಪರಿಪೂರ್ಣ ನೀರಾವರಿ ಕಲ್ಪಿಸಬೇಕು ಎಂದರು. ನಮ್ಮ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟರೆ ಮಾತ್ರ ನಾವು ರೇವಣಸಿದ್ಧೇಶ್ವ ಏತ ನೀರಾವರಿ ಯೋಜನೆ ಸಹಕಾರ ನೀಡುತ್ತೇವೆ, ಇಲ್ಲವಾದರೆ ಅದನ್ನು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸತೀಶ ಪಾಟೀಲ ಮಾತನಾಡಿ, ಕನ್ನೂರ, ಮಡಸನಾಳ ಸೇರಿದಂತೆ 14 ಗ್ರಾಮಗಳಲ್ಲಿ ರೇವಣಸಿದ್ಧೇಶ್ವರ ಏತ ನೀರಾವರಿಯ ಮೂರು ಜಾಕ್ವೇಲಗಳನ್ನು ಅವಶ್ಯಕತೆ ಇದ್ದಲ್ಲಿ ಅಳವಡಿಸಿ ಸಮಗ್ರ ನೀರಾವರಿ ಮಾಡಬೇಕು. ಈ ಯೋಜನೆಯು 2638 ಕೋಟಿ ರೂ. ಮೂರು ಹಂತದಲ್ಲಿ ಅಂದರೆ 760 ಕೋಟಿ ಮೊದಲನೇ ಹಂತ, 939 ಕೋಟಿ ಮೂರನೆ ಹಂತ ಕಾಮಗಾರಿ ನಡೆಸುವ ಯೋಜನೆ ರೂಪಿಸಲಾಗಿದೆ. ಮೊದಲನೇ ಹಂತದಲ್ಲಿ ಜಾಕ್ವೆಲ ಬಿಡುವುದು, ತಾಂತ್ರಿಕ ವ್ಯವಸ್ಥೆ ಹಾಗೂ ಸರ್ವೆ ಮಾಡುವುದಾಗಿದೆ. ಈ ನಕ್ಷೆಯಲ್ಲಿ ಕನ್ನೂರಿನ ಯಾವುದೇ ಭಾಗದಲ್ಲಿ ಜಾಕ್ವೆಲ ಬಿಡದಿದ್ದಕ್ಕಾಗಿ ಶಾಶ್ವತ ನೀರಾವರಿ ವಂಚಿತ ಪ್ರದೇಶವಾಗಿ ಉಳಿದು ಬಿಡುವುದೋ ಏನೋ ಎಂಬ ಭಯದಿಂದ ಈ ಆಮರಣ ಉಪವಾಸ ಸತ್ಯಾಗ್ರಹಕವನ್ನು ಹಮ್ಮಿಕೊಂಡಿದ್ದೇವು. ಆದರೆ ಆಮರಣ ಉಪವಾಸ ಸತ್ಯಾಗ್ರಹಕ್ಕೆ ಕೊನೆ ಕ್ಷಣದಲ್ಲಿ ಏಕಾ ಏಕಿ ವಿಜಯಪುರ ಜಿಲ್ಲಾಡಳಿತ ಅನುಮತಿ ನೀಡದೆ ಬ್ರಿಟಿಷ್ ಆಡಳಿತವನ್ನು ರೈತರ ಮೇಲೆ ಹೇರಿ ರೈತರಿಗೆ ಅನ್ಯಾಯಮಾಡಿದೆ ಎಂದರು.
ನೀರಾವರಿ ಎಲ್ಲ ಯೋಜನೆಗಳು ನಮ್ಮ ಭಾಗದಲ್ಲಿ ಹಾಯ್ದು ಹೋಗುತ್ತಿವೆ. ಆದರೂ ಕೂಡ ನಮಗೆ ಕುಡಿಯಲು ನೀರಿನ ಸೌಲಭ್ಯ ನೀಡದೆ ಇರುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ.
ಈ ಸಂದರ್ಭದಲ್ಲಿ ಗುರು ಅಚಕನಳ್ಳಿ ಮಾತನಾಡಿ, ನಮ್ಮ ಕನ್ನೂರಿನ ಭಾಗದಲ್ಲಿ ಕುಡಿಯಲು ನೀರಿಲ್ಲ. ನಮ್ಮ ಊರಲ್ಲೇ ರೇವಣಸಿದ್ಧೇಶ್ವರ ಏತ ನೀರಾವರಿ ಹಾಯ್ದು ಹೋಗಿದೆ. ಆದರೆ ನಮ್ಮ ಭಾಗದಲ್ಲಿ ನೀರಾವರಿ ಸೌಲಭ್ಯವಿಲ್ಲ. ದಯಮಾಡಿ ನಮಗೆ ನೀರು ಕೊಡಿ, ಬೊಗಸೆ ನೀರು ಕೊಡಿ ಎಂದರು.
ಈ ವೇಳೆ ಉಪವಾಸ ಸತ್ಯಾಗ್ರಹ ಕೂಡಲು ಬಂದಿದ್ದ ರೈತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೆಲವೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆನಂದ ಕೆ. ಅವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಒಂದು ವಾರದಲ್ಲಿ ತಮ್ಮ ಎಲ್ಲ ಸಮಸ್ಯೆಗಳನ್ನು ತಿಳಿದುಕೊಂಡು ರೈತರ ಸಮಸ್ಯೆಯನ್ನು ಬಗೆ ಹರಿಸಿಕೊಡುವ ಭರವಸೆಯನ್ನು ನೀಡಿ ಆಮರಣ ಉಪವಾಸ ಸತ್ಯಾಗ್ರಹವನ್ನು ಇಲ್ಲಿಗೆ ಕೈ ಬಿಡಬೇಕೆಂದು ರೈತರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕನ್ನೂರ ಹಾಗೂ ಮಡಸನಾಳ, ಕನ್ನಾಳ, ಗುಣಕಿ ಮತ್ತು ಗುಣಕಿ ತಾಂಡಾ, ಬೊಮ್ಮನಹಳ್ಳಿ, ಮಿಂಚನಾಳ ಮತ್ತು ಮಿಂಚನಾಳ ತಾಂಡಾ, ಶಿರನಾಳ, ಮಖಣಾಪೂರ ಮತ್ತು ಮಖಣಾಪೂರ ತಾಂಡಾ, ತಿಡಗುಂದಿ, ಹಾಗೂ ಡೊಮನಾಳ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

