ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಆದೇಶದ ಮೇರೆಗೆ ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಚಡಚಣ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ ಹಾಗೂ ಪ್ರಧಾನ ಕಾರ್ಯದರ್ಶಿ ವಿಠ್ಠಲ ಕಾಂಬಳೆ ಮಾತನಾಡಿ, ಕಂದಾಯ ಇಲಾಖೆ ನೀಡುವ ಚುನಾವಣೆ ಮತ್ತು ಇತರೆ ಕಾರ್ಯಗಳನ್ನು ಶಿಕ್ಷಕರು ಚಾಚು ತಪ್ಪದೇ ಮಾಡುತ್ತಿದ್ದಾರೆ. ಆದರೆ ಈಗ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಕೆಲಸದ ಒತ್ತಡ ಹೆಚ್ಚಾಗಿದೆ. ಶಾಲೆಗಳು ಆರಂಭಗೊಂಡಿದ್ದು ಶಿಕ್ಷಕರು ಇದರಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬೇಕಿದೆ. ಇತರೆ ಇಲಾಖೆಯ ಕೆಲಸಗಳಿಂದ ಬೋಧನೆಗೆ ಸಮಯವೇ ಸಿಗುತ್ತಿಲ್ಲ. ಇದು ಮಕ್ಕಳ ಪಾಠದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಾರಣ ಶಿಕ್ಷಕರನ್ನು ಈ ಕೆಲಸದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಸೋನಗಿ ಹಾಗೂ ಪ್ರಧಾನ ಕಾರ್ಯದರ್ಶಿ ಬಸವಂತ ಉಮರಾಣಿ ಮಾತನಾಡಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕೆಂದು ಒತ್ತಾಯ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್ ಎಸ್ ಪಾಟೀಲ ಮಾತನಾಡಿ, ಒಂದು ತಿಂಗಳ ಕಾಲ ಮತದಾರರ ಪಟ್ಟಿ ತಯಾರಿಕೆ, ಮತ್ತು ಮನೆ ಮನೆಗೆ ಬೇಟಿ ಕರ್ತವ್ಯದಲ್ಲಿ ಶಿಕ್ಷಕರು ತೊಡಗಿಕೊಂಡಾಗ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಸಂಜಯ ಇಂಗಳೆ ಸರಕಾರಿ ನೌಕರರ ಸಂಘದ ಮನವಿಗೆ ಸಂಪೂರ್ಣವಾಗಿ ಸ್ಪಂದಿಸುವದಾಗಿ ತಿಳಿಸಿದರು.
ಚಡಚಣ ತಾಲೂಕಿನ ನೌಕರರ ಸಂಘದ ಸಲೀಮ್ ಮಕಾನದಾರ, ಮಲ್ಲು ಮೇತ್ರಿ ಹಾಗೂ ಎಲ್ಲ ಪದಾಧಿಕಾರಿಗಳು,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಮಾರ ತೇಲಿ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

