ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಕರು ಕಾಟಾಚಾರಕ್ಕಾಗಿ ತಮ್ಮ ಕಾರ್ಯ ಚಟುವಟಿಕೆ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಅದು ನಮಗೆ ಬದುಕಿನಲ್ಲಿ ನೆಮ್ಮದಿಯನ್ನ ತರಲಾರದು. ವೃತ್ತಿಯನ್ನ ಪ್ರೀತಿಸಿ ಆನಂದಿಸಿ ಸೇವೆ ಮಾಡಬೇಕು ಎಂದು ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಸು೩೫ ವರ್ಷಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗುರುವಾರ ಸೇವಾ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಡಾ.ಅರವಿಂದ ಮನಗೂಳಿ ಅವರಿಗೆ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ವಿವಿಧ ಅಂಗ ಸಂಸ್ಥೆಗಳು ಹಮ್ಮಿಕೊಂಡ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಶೈಕ್ಷಣಿಕ ಸಂಸ್ಥೆಯ ಯಶಸ್ಸು ಶಿಕ್ಷಕರ ಪರಿಣಾಮಕಾರಿತ್ವವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಅವರು ಜ್ಞಾನವನ್ನು ವರ್ಗಾಯಿಸುವುದು, ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಬೋಧನಾ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯ ಶಿಕ್ಷಕರದ್ದಾಗಿರುತ್ತದೆ. ಜಗತ್ತಿನ ಎಲ್ಲ ವೃತ್ತಿಗಳಿಗಿಂತ ಅತ್ಯಂತ ಪವಿತ್ರವಾಗಿರುವ ಕಾರ್ಯವಾಗಿದೆ ಎಂದರು.
ಈ ವೇಳೆ ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿದರು. ಈ ವೇಳೆ ಡಾ.ಅರವಿಂದ ಮನಗೂಳಿ ಅವರಿಗೆ ಸಂಸ್ಥೆಯ ಅಂಗ ಸಂಸ್ಥೆಗಳಾದ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯ, ಎಚ್.ಜಿ.ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪಪೂ ಕಾಲೇಜು, ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆ, ಎಚ್.ಜಿ.ಬಾಲಕರ ಪ್ರೌಢಶಾಲೆ, ಎಚ್.ಜಿ. ಪ್ರಾಥಮಿಕ ಶಾಲೆ, ಜೆ.ಎಚ್.ಪಟೇಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರು ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ಅವರು ಪುಸ್ತಕ ಮತ್ತು ಹೂಗುಚ್ಛ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿ.ಡಿ.ಮಾಸ್ತಿ, ಎಸ್.ಬಿ.ಕುಲಕರ್ಣಿ, ಎಸ್.ಆರ್. ನಾಯಕ, ಸುಭಾಷ್ ಪಾಟೀಲ್, ಎಸ್.ಎ.ಪಾಟೀಲ, ಡಾ.ನಾಗರಾಜ ಮುರಗೋಡ, ಬಿ.ಜಿ. ಮಠ, ಬಿ.ಎಸ್.ಬಿರಾದಾರ, ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ವಿ.ಬಿ.ಪಾಟೀಲ, ಡಾ. ಅಂಬರೀಶ ಬಿರಾದಾರ, ಎಸ್.ಎ.ಜಾಗೀರದಾರ, ಎಸ್.ಕೆ.ಹೂಗಾರ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

