ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸತ್ತಾಗ ಆಸ್ತಿ, ದುಡ್ಡು ನಮ್ಮೊಂದಿಗೆ ಬರುವುದಿಲ್ಲ. ಬಂಧು-ಬಾಂಧವರು ಸ್ಮಶಾನದವರೆಗೆ ಮಾತ್ರ ಬರುತ್ತಾರೆ. ಆದರೆ, ಬದುಕಿದ್ದಾಗ ಮಾಡಿದ ದಾನ, ಧರ್ಮ, ಪರೋಪಕಾರದ ಪುಣ್ಯ ಮಾತ್ರ ನಾವು ಸತ್ತಾಗ ನಮ್ಮೊ ೦ದಿಗೆ ಬರುತ್ತವೆ ಎಂದು ಓಲೆಮಠದ ಆನಂದ ದೇವರು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ದಿನಕ್ಕೊಂದು ಓಣಿಯಲ್ಲಿ ನಡೆಯುತ್ತಿರುವ ವಚನ ಶ್ರಾವಣ ಅಂಗವಾಗಿ ಸಿದ್ಧರಾಮೇಶ್ವರ ಕಾಲೊನಿಯ ಗಣಪತಿಗುಡಿ ಆವರಣದಲ್ಲಿ ಮಂಗಳವಾರ ಸಂಜೆ ನಡೆದ 5ನೇ ದಿನದ ಕಾರ್ಯಕ್ರಮದಲ್ಲಿ ಅವರು ಸಾವಿಗೆ ಸಂಗಡವಾರು ಇಲ್ಲ ಎಂಬ ಶರಣ ಮೋಳಗಿ ಮಾರಯ್ಯನವರ ವಚನ ಕುರಿತು ಆಶೀರ್ವಚನ ನೀಡಿದರು.
ನಿನ್ನಿಂದಲೆ ಎಲ್ಲ ಸಂಪಾದನೆ ಸಾಧ್ಯವಾಗಿದೆ ಎಂದು ಗಂಡ ತನ್ನ ಹೆಂಡತಿಗೆ ಆಗಾಗ ಹೇಳುತ್ತಿರಬೇಕು. ನಿನ್ನ ಪರಿಶ್ರಮದ ಫಲವಾಗಿ ಗಳಿಕೆ ಸಾಧ್ಯವಾಗುತ್ತಿದೆ ಎಂದು ಹೆಂಡತಿ ತನ್ನ ಗಂಡನಿಗೆ ಹೇಳುತ್ತಿರಬೇಕು. ನಮ್ಮ ನಂತರ ನಾವು ಗಳಿಸಿದ ಎಲ್ಲ ಸಂಪತ್ತಿಗೆ ನೀವೆ ವಾರಸುದಾರರು ಎಂದು ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಹೇಳುತ್ತಿರಬೇಕು. ಭಗವಂತ ಎಲ್ಲವೂ ನಿನ್ನ ಆಶೀರ್ವಾದ. ನನ್ನದು ಏನೂ ಇಲ್ಲ ಎಂಬ ಭಾವವನ್ನು ಬೆಳೆಸಿಕೊಂಡವರ ಬದುಕು ಸುಂದರವಾಗುತ್ತದೆ ಎಂದರು.
ಮಧುರಖಂಡಿಯ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ದುಂಡಯ್ಯ ಹಿರೇಮಠ ಮುಖ್ಯ ಅತಿಥಿಯಾಗಿ ಮಾತನಾಡಿ, ಆಸ್ತಿ, ಅಂತಸ್ತು, ಹೆಂಡತಿ, ಮಕ್ಕಳಿಂದ ಆನಂದ ದೊರೆಯುತ್ತದೆ. ಆದರೆ, ದಾನ-ಧರ್ಮ, ಮಾಡುವುದರಿಂದ ಆತ್ಮಾನಂದ ದೊರೆಯುತ್ತದೆ. ಆದ್ದರಿಂದ ಹುಟ್ಟು-ಸಾವಿನ ನಡುವಿನ ಬದುಕನ್ನು ಅನುಭವಿಸಿ ಸಂಭ್ರಮಿಸಬೇಕು ಎಂದರು.
ಗಣಪತಿ ದೇವಸ್ಥಾನಕ್ಕೆ ವರ್ಷವಿಡಿ ವಿವಿಧ ಸೇವೆಗೈದ ಸಿದ್ಧರಾಮೇಶ್ವರ ಕಾಲೋನಿಯ ನಿವಾಸಿಗಳಾದ ಈಶ್ವರಯ್ಯ ಗಣಾಚಾರಿ, ನಿವೃತ್ತ ಶಿಕ್ಷಕ ಎಂ.ರ್ಆ. ಸಿದರಡ್ಡಿ, ವಕೀಲ ರ್ಆ.ಕೆ. ನಾಯಕ, ಪಿ.ರ್ಆ. ರಾಮತಾಳ, ಬಿ.ಕೆ. ಪಡೆಣ್ಣವರ, ಎಂಜಿನಿಯರ್ ಎಸ್.ಎಸ್.ಕಲ್ಯಾಣಿ, ಚಿನ್ನಮ್ಮಮಠಪತಿ ಅವರನ್ನು ಸನ್ಮಾನಿಸಲಾಯಿತು. ಹೆಸ್ಕಾಂನ ಪರಶುರಾಮ ಗುದಗಿಯವರ, ಹುಲ್ಯಾಳದ ವೇದಮೂರ್ತಿ ದುಂಡಯ್ಯ ಹಿರೇಮಠ, ನಗರಸಭೆ ಸದಸ್ಯ ಪ್ರಕಾಶ ಹಂಗರಗಿ ಇದ್ದರು.
ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತೆ ಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕ ಎಂ.ಬಿ. ಇಂಡಿ ಸ್ವಾಗತಿಸಿ, ನಿರೂಪಿಸಿದರು.

