ವಿಜಯಪುರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸಿಇಓ ಭೇಟಿ | ಜಲಜೀವನ ಮಿಷನ್ ಕಾಮಗಾರಿಗಳ ಪರಿಶೀಲಿಸಿದ ಸಿಇಓ ರಿಷಿ ಆನಂದ್ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೂರ್ವದಲ್ಲಿ ಓವರ್ ಹೆಡ್ ಟ್ಯಾಂಕ್ ನ್ನು ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಿ, ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಗ್ರಾಮಗಳಲ್ಲಿರುವ ಹಳೆಯ ಸಂಪರ್ಕಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ನೀಡಲಾದ ಹೊಸ ನಳ ಸಂಪರ್ಕಗಳ ಮೂಲಕ ನೀರನ್ನು ಪೂರೈಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಿಷಿ ಆನಂದ ಅವರು ಸೂಚಿಸಿದರು.
ವಿಜಯಪುರ ತಾಲೂಕಿನ ಐನಾಪುರ, ಐನಾಪುರ ಎಲ್ ಟಿ, ಬುರಣಾಪುರ, ಮದಭಾವಿ, ಕುಮಟಗಿ, ಕಗ್ಗೋಡ, ಕಗ್ಗೋಡ ಎಲ್‌ಟಿ, ದೇವರ ಹಿಪ್ಪರಗಿ ತಾಲೂಕಿನಪಡಗಾನೂರ, ಪಡಗಾನೂರ ಎಲ್ ಟಿ, ಕೊಂಡಗೂಳಿ, ಹಂಚಲಿ ಮತ್ತು ಕೋರವಾರ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಪ್ರತಿ ಮನೆಗಳ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದ ಅವರು ಜಲಮಿಷನ್ ಯೋಜನೆಯಡಿ ಪ್ರತಿ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಬೇಕು. ಪ್ರತಿನಿತ್ಯ ಮನೆ-ಮನೆಗೂ ಸಾಕಷ್ಟು ಪ್ರಮಾಣ ನೀರನ್ನು ಸರಬರಾಜು ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ರಾಠೋಡ, ದೇವರ ಹಿಪ್ಪರಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಾರತಿ ಚಲುವಯ್ಯ, ಸಹಾಯಕ ನಿರ್ದೇಶಕರಾದ ಶಿವಾನಂದ ಮೂಲಿಮನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತಾರಾನಾಥ ರಾಠೋಡ, ಸಂತೋಷ ಪಾಟೀಲ, ಸೆಕ್ಷನ್ ಆಫೀಸರ್ ಹಣಮಂತ ಸಾರವಾಡ, ಶಾಖಾಧಿಕಾರಿಗಳಾದ ಶಿವಪುತ್ರಪ್ಪಾ ಮಾನಶೆಟ್ಟಿ, ಮದಭಾವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್ ಕಟ್ಟಿ, ಕುಮಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರೇಖಾ ಪವಾರ, ಕೋರವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಶಿನಾಥ ಕಡಕಬಾವಿ, ಕೊಂಡಗೂಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಕ್ಕಮಹಾದೇವಿ ಅಂಗಡಿ, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ ಗ್ರಾಮದ ಜನಪ್ರತಿನಿಧಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

