ಉದಯರಶ್ಮಿ ದಿನಪತ್ರಿಕೆ
ಮುದ್ದೆಬಿಹಾಳ: ಮಾಲಿಕರಿಲ್ಲದ ಬೀದಿ ದನಗಳ ಹಾವಳಿ ತಡೆಗಟ್ಟಿ ರೈತರ ಬೆಳೆಯನ್ನು ಉಳಿಸಬೇಕು ಒತ್ತಾಯಿಸಿ ರೈತ ಮುಖಂಡರು ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮುಖಂಡ ರಫೀಕ ಬೀಳಗಿ ಮಾತನಾಡಿ, ಬೀದಿ ದನಗಳ ಹಾವಳಿಯಿಂದ ಬೇಸತ್ತು ಹೋಗಿದ್ದೇವೆ. ಹಗಲು ರಾತ್ರಿ ಎನ್ನದೇ ಬೇಲಿ ಜಿಗಿದು ಹೊಲಗಳಿಗೆ ನುಗ್ಗಿ ಬೆಳೆಯನ್ನೆಲ್ಲ ಹಾಳುಮಾಡುತ್ತಿವೆ. ಅಲ್ಲದೇ ಜಮೀನನ್ನು ಕಾಯುವ ರೈತರ ಮೇಲೂ ಮಗಿಬಿಳುತ್ತಿವೆ. ಇದರಿಂದ ರೈತ ಬೆಳೆ ಕಳೆದುಕೊಳ್ಳುತ್ತಿರುವದಲ್ಲದೇ ಪ್ರಾಣ ಭಯದಿಂದ ಜೀವನ ನಡೆಸುವಂತಾಗಿದೆ. ಜಮೀನುಗಳಲ್ಲಿ ಮಾತ್ರವಲ್ಲದೇ ಈ ದನಗಳು ಸಾರ್ವಜನಿಕರು ಸದಾ ಓಡಾಡುವ ಪ್ರಮುಖ ರಸ್ತೆಗಳಲ್ಲಿ, ಮುಖ್ಯ ಬಜಾರ್ ನಲ್ಲಿ, ಪ್ರಮುಖ ವೃತ್ತಗಳಲ್ಲಿ ಜನೆತೆಗೆ, ಅಂಗಡಿಕಾರರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ನೀಡುತ್ತಿವೆ. ಈ ತೊಂದರೆಯಿಂದ ರೈತರು ಮಾತ್ರವಲ್ಲದೇ ಸಾರ್ವಜನಿಕರೂ ಕೂಡ ಹೈರಾಣಾಗಿದ್ದಾರೆ. ಈ ಬಗ್ಗೆ ಪುರಸಭೆಯವರು ಕೂಡಲೇ ಎಚ್ಚೆತ್ತುಕೊಂಡು ಎಲ್ಲ ದನಗಳನ್ನು ಹತ್ತಿರದ ಗೋಶಾಲೆಗೆ ಕಳುಹಿಸಬೇಕು. ತಪ್ಪಿದ್ದಲ್ಲಿ ಸಾವಿರಾರು ರೈತರು ಸೇರಿ ಪುರಸಭೆ ಎದುರು ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ರೈತರು ಅಲ್ಲಿ ಇಲ್ಲಿ ಸಾಲ ಕೇಳಿ ಹಣ ಹೊಂದಿಸಿಕೊಂಡು ಬಿತ್ತನೆ ಮಾಡುತ್ತಾ ಇದ್ದೇವೆ. ಒಂದು ಕಡೆ ಮಳೆ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆಗಳು ಹಾಳಾಗುತ್ತಿದ್ದರೆ ಇನ್ನೊಂದೆಡೆ ಬೆಳೆಗಳನ್ನು ಬೀದಿ ದನಗಳು ನಾಶ ಮಾಡಿ ನಮ್ಮ ಬದುಕಿಗೆ ಕೊಳ್ಳಿ ಇಡುತ್ತಿವೆ. ಒಂದೇ ಬಾರಿಗೆ ೪೦ ರಿಂದ ೫೦ ಬೀದಿ ದನಗಳು ಒಟ್ಟಿಗೆ ಬೇಲಿ ಹಾರಿ ಬಂದು ಬೆಳೆ ಮಾತ್ರವಲ್ಲದೇ ಭೂಮಿಯನ್ನೂ ಸಹ ನಾಶ ಮಾಡುತ್ತಿವೆ. ದನಗಳಿಗೆ ಹೊಡೆಯಲು ಮುಂದಾದರೆ ಮದ ಬಂದಂತೆ ವರ್ತಿಸಿ ನಮ್ಮ ಮೇಲೆಯೇ ದಾಳಿಗೆ ಮುಂದಾಗುತ್ತಿವೆ. ಕಾರಣ ನಮ್ಮ ಅಳಲನ್ನು ಸ್ವೀಕರಿಸಿ ಮಾಲಿಕರಿಲ್ಲದ ದನಗಳನ್ನು ಗೋಶಾಲೆಗೆ ಕಳಿಸಬೇಕು ಎಂದು ಮನವಿ ಪತ್ರದಲ್ಲಿ ಕಾಣಿಸಲಾಗಿದೆ.
ಈ ವೇಳೆ ಮಲ್ಲಪ್ಪ ಕುಂಬಾರ, ಯಾಸೀನ್ ದೇಸಾಯಿ, ಬೀರಪ್ಪ ನಡಗೇರಿ, ಸೈಫನಸಾಬ ನಾಯ್ಕೋಡಿ, ರಾಚಯ್ಯ ಶಿವಯೋಗಿಮಠ, ಲಾಲೇಸಾಬ ನಾಯ್ಕೋಡಿ, ದವಲಸಾಬ್ ಸಂಕನಾಳ, ಅಬ್ದುಲ್‌ರಝಾಕ್ ಸಂಕನಾಳ, ಪರಶುರಾಮ ನಡಗೇರಿ, ಹುಸೇನಸಾಬ ಬಾವೂರ, ಬಿ.ಎಂ.ಮೇಲಿನಮನಿ, ರೇವಣಸಿದ್ಧ ನಡಗೇರಿ, ಅಬ್ದುಲ್ ನಾಯ್ಕೋಡಿ, ಇಮಾಮಲಿ ದೇಸಾಯಿ, ಜಗದೀಶ್ ಲಕ್ಷಟ್ಟಿ, ಕುತುಬು ನಾಯ್ಕೊಡಿ, ಫಾರೂಕ್ ಅತ್ತಾರ ಸೇರಿದಂತೆ ಮತ್ತೀತರರು ಇದ್ದರು.

