ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ೫ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದಕ್ಕಾಗಿ ಮತ್ತು ನಾಗರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಪೂಜಿಸುವುದರಿಂದ ಕಾಳ ಸರ್ಪ ದೋಷ ನಿವಾರಣೆಯಾಗುವುದು ಮತ್ತು ಹಾವು ಕಡಿತದ ಭಯವು ಮಾಯವಾಗುವುದು. ಈ ವಿಶೇಷ ದಿನದಂದು ನಾಗ ದೇವರ ಭಕ್ತರು ನಾಗಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಅವುಗಳನ್ನು ಪೂಜಿಸುತ್ತಾರೆ. ಸಮೃದ್ಧಿ, ಸುರಕ್ಷತೆಯನ್ನು ಬೇಡಿಕೊಳ್ಳುತ್ತಾರೆ.
ವಿಜಯಪುರದ ಆದರ್ಶ ನಗರದ ಶಿವಾಲಯ ಮಂದಿರದ ಆವರಣದಲ್ಲಿರುವ ನಾಗದೇವನಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಹಿಳೆಯರು ನಾಗದೇವನಿಗೆ ಅರಿಶಿನ, ಕುಂಕುಮ, ಹಾಲು, ಹಣ್ಣು, ನೈವೇದ್ಯವನ್ನು ಅರ್ಪಿಸಿ, ಗೆಜ್ಜೆ ವಸ್ತçಗಳಿಂದ ನಾಗರ ಕಲ್ಲನ್ನು ಅಲಂಕರಿಸಿ, ದೀಪ, ಧೂಪ, ಅಗರಬತ್ತಿಯನ್ನು ಹಚ್ಚಿ ಪೂಜೆಯನ್ನು ಮಾಡಲಾಯಿತು. ಈ ಮೂಲಕ ನಾಗರ ಪಂಚಮಿ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು.
ಈ ವೇಳೆಯಲ್ಲಿ ಶ್ರೀಮತಿ ಕವಿತಾ ಮಾಳಿ ಮಾತನಾಡುತ್ತ. ನಾಗರ ಪಂಚಮಿ ಹಬ್ಬದ ದಿನದಂದು ನಾವು ನಾಗ ದೇವರನ್ನು ಪೂಜಿಸುವುದರಿಂದ, ನಾಗ ದೇವರ ವಿಗ್ರಹಗಳಿಗೆ ಹಾಲು, ಹಣ್ಣು, ಹೂವುಗಳನ್ನು ಅರ್ಪಿಸುವುದರಿಂದ ಕಾಳ ಸರ್ಪ ದೋಷವು ಪರಿಹಾರವಾಗುವುದು ಎನ್ನುವ ನಂಬಿಕೆಯಿದೆ. ಮುಖ್ಯವಾಗಿ ನಾಗರ ಪಂಚಮಿ ಹಬ್ಬವನ್ನು ಹಾವುಗಳ ಮೇಲಿನ ಗೌರವ ಮತ್ತು ರಕ್ಷಣೆಯ ಅಂಗವಾಗಿ ಆಚರಿಸಲಾಗುವ ಹಬ್ಬವಾಗಿದೆ.
ಈ ಸಂದರ್ಭದಲ್ಲಿ ಶ್ರೀಮತಿ ಶ್ರೀದೇವಿ ಜೋಳದರವರು ಮಾತನಾಡುತ್ತ. ಅಣ್ಣ-ತಂಗಿಯರ ಪ್ರೀತಿಗೆ ಸಾಕ್ಷಿಯಾದ ಹಬ್ಬ. ಆಧ್ಯಾತ್ಮಿಕ, ಸಾಮಾಜಿಕ ಪ್ರಜ್ಞೆ ಜತೆ ಪರಿಸರ ಜಾಗೃತಿ, ಸಂರಕ್ಷಣೆ ಮಹತ್ವ ಸಾರುವ ನಾಗರ ಪಂಚಮಿ ಹಬ್ಬವಾಗಿದೆ ಎಂದರು.
ಜನಮೇಜಯನ ಸರ್ಪಸತ್ರವನ್ನು ಆಸ್ತಿಕ ತಡೆದದ್ದು ಮತ್ತು ಶ್ರೀಕೃಷ್ಣ ಕಾಳಿಂಗ ಮರ್ದನವನ್ನು ಮಾಡಿದ್ದು ಇದೇ ದಿನವೆಂದು ಪ್ರತೀತಿಯಿದೆ.
ಈ ವೇಳೆ ಶ್ರೀಮತಿ ಸುನೀತಾ ತೇರದಾಳ, ಪವಿತ್ರಾ ವಾಗೋಲೆ, ಸಂಜನಾ ಜೋಳದ, ಚಿನ್ಮಯಿ ತೇರದಾಳ, ಸಮೃದ್ಧಿ ವಾಗೋಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

