ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ. ಕೆ ಅವರು ಬುಧವಾರ ಭೇಟಿ ನೀಡಿ, ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಕಡತಗಳ ಪರಿಶೀಲನೆ, ನ್ಯಾಯಾಲಯ ಪ್ರಕರಣಗಳ ಕಡತ, ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ ಪ್ರಗತಿ ಮಾಹಿತಿ, ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂಸುರಕ್ಷಾ ಯೋಜನೆಯ ಪ್ರಗತಿ ಸಾಧಿಸಬೇಕು. ದಾಖಲೆಗಳನ್ನು ಸಮರ್ಪಕವಾಗಿ ದಾಖಲೀಕರಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
ಮುದ್ದೇಬಿಹಾಳ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಸಾರ್ವಜನಿಕ ಸಂಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುದ್ದೇಬಿಹಾಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು.
ಅಗತ್ಯ ಮೂಲಭೂತ ಸೌಲಭ್ಯ ಖಚಿತಪಡಿಸಿಕೊಳ್ಳಬೇಕು. ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ತಾಳಿಕೋಟಿಯ ಹಳೆ ಪುರಸಭೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಹಶೀಲ್ದಾರ ಎ.ಡಿ.ಅಮರಾವಡಗಿ, ತಾಳಿಕೋಟಿ ತಹಶೀಲ್ದಾರರಾದ ವಿನಯಾ ಹೂಗಾರ, ಮುಖ್ಯಾಧಿಕಾರಿಗಳಾದ ಮಲ್ಲನಗೌಡ ಬಿರಾದಾರ, ಆಸ್ಪತ್ರೆಯ ವೈದ್ಯರಾದ ಸತೀಶ ತಿವಾರಿ, ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದ್ದರು.

