ಎರಡನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ರಮೇಶ ಅಪ್ಪಾಸಾಹೇಬ ಮಹಾಜನ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾನವ ಕಳ್ಳ ಸಾಗಾಣಿಕೆ ಸಮಾಜಕ್ಕೆ ಅಂಟಿದ ಕಳಂಕವಾಗಿದ್ದು, ಇದನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಎರಡನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ರಮೇಶ ಅಪ್ಪಾಸಾಹೇಬ ಮಹಾಜನ ಹೇಳಿದರು.
ನಗರದ ರುಡ್‌ಸೆಟ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಯಪುರ ನಗರ-ಗ್ರಾಮೀಣದ ಶಿಶು ಅಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ ಬುಧವಾರ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆ ಇದೊಂದು ಸಮಾಜಕ್ಕೆ ಅಂಟಿದ ಜಾಡ್ಯ, ಇದನ್ನು ತಡೆಗಟ್ಟುವುದು ಎಲ್ಲರ ಕರ್ತವ್ಯವಾಗಿದೆ. ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ಹಾಗೂ ಕಾನೂನು ಅರಿವು ಹೊಂದಬೇಕು. ಇಂತಹ ಪ್ರಕರಣಗಳ ಕಡಿವಾಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಈ ಕಾರ್ಯದಲ್ಲಿ ಪೋಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರವಲ್ಲದೇ ವಿವಿಧ ಇಲಾಖೆಗಳ ಸಹಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವ ಮಹತ್ವವಾಗಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಅವರು ಮಾತನಾಡಿ, ಸಮಾಜದಲ್ಲಿ ಮಾನವ ಕಳ್ಳಸಾಗಾಣಿಕೆ ಬಹುದೊಡ್ಡ ಸಮಸ್ಯೆಯಾಗಿದ್ದು, ಮಾನವ ಕಳ್ಳಸಾಗಾಣಿಕೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಾರೆ. ಅಪಹರಿಸಿದ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ. ಇಂತಹ ಹೀನಕೃತ್ಯ ತಡೆಯುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅಪರಿಚಿತ, ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೋಲೀಸರ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲು ಎಲ್ಲ ಇಲಾಖೆಗಳ ಸಹಭಾಗಿತ್ವದ ಜೊತೆಗೆ, ಬದ್ಧತೆ ಕೂಡಾ ಅಗತ್ಯವಾಗಿದೆ. ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವ ಕುರಿತು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತ ಮಟ್ಟದಲ್ಲಿ ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಮೇಲ್ವಿಚಾರಕಿಯ ಮೂಲಕ ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಉಜ್ವಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕರಾದ ಶ್ರೀಮತಿ ಸುನಂದಾ ತೋಳಬಂದಿ, ಸ್ಪಂದನಾ ಸಂಸ್ಥೆಯ ರಮೇಶ ಹೊನಮೊರೆ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಬೇಕು. ಮಾನವ ಕಳ್ಳಸಾಗಾಣಿಕೆಯ ಕಾಯ್ದೆ-ಕಾನೂನುಗಳ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು. ಬಡತನ ಮತ್ತು ಅವಿದ್ಯಾವಂತರು ಇಂತಹ ಆಮಿಷಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲು ನ್ಯಾಯಾಲಯಕ್ಕೆ ಸಾಕ್ಷ್ಯ ಅಗತ್ಯವಿರುತ್ತದೆ. ಸಾರ್ವಜನಿಕರು ಇಂಥ ಪ್ರಕರಣಗಳಲ್ಲಿ ಸಾಕ್ಷಿ ಹೇಳಲು ಮುಂದೆ ಬರಬೇಕು. ಇದರಿಂದಾಗಿ ಮಾನವ ಕಳ್ಳಸಾಗಾಣಿಕೆ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ದೀಪಾ ಕಾಳೆ, ಮಹಿಳಾ ಮಾನವ ಕಳ್ಳಸಾಗಣೆ ತಡೆ ಕುರಿತು ಪ್ರತಿಜ್ಞಾವಿದಿ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿ,ಸಿಬ್ಬಂದಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಸಖಿ, ಸಾಂತ್ವನ, ಶಕ್ತಿ ಸದನ, ಸಂಸ್ಥೆಯ ಮುಖ್ಯಸ್ಥರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

