ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಮೂಲಕ ತಿಕೋಟಾದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಎ.ಬಿ.ಜತ್ತಿ ಪ.ಪೂ. ಕಾಲೇಜು ಆವರಣದಲ್ಲಿ ನಡೆದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಿಕೋಟಾ ತಹಶೀಲ್ದಾರ ಸುರೇಶ ಚವಲರ್ ಅವರು ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ಅಡಗಿರುವ ಕಲಾ ಪ್ರತಿಭೆಯ ಅನಾವರಣಕ್ಕೆ ಈ ಕಾರ್ಯಕ್ರಮ ಅತ್ಯಂತ ಸೂಕ್ತವಾಗಿದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸೂಪ್ತ ಪ್ರತಿಭೆ ಬೆಳಕಿಗೆ ಬರಲು ಪೂರಕವಾಗಿ ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯಗಳಲ್ಲಿ ಬಹುಮುಖ್ಯವಾಗಿದೆ. ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರಲ್ಲಿನ ಸೃಜನಾತ್ಮಕ ಕಲೆಗೆ ಪ್ರೋತ್ಸಾಹ ದೊರೆತು ಕಲಾ ಪ್ರೌಢಿಮೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ಅವರು ಹೇಳಿದರು. ನಾಡಿನ ಕಲೆ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಕೋಟಾದ ಶ್ರೀ ಎ.ಬಿ. ಜತ್ತಿಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಸಿ.ಬಿ.ಪಾಟೀಲ ಇವರು ಶಾಲಾ ಕಾಲೇಜುಗಳಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸುಗಮ ಸಂಗೀತವನ್ನು ಕು.ಚೈತ್ರಾ ಡಂಬಳ ಹಾಗೂ ತಂಡ, ಮುದ್ದೇಬಿಹಾಳ, ಜಾನಪದ ಗೀತೆಗಳ ಗಾಯನವನ್ನು ಭಂಟನೂರಿನ ಕಿರಣ ಕುಮಾರ ಪೂಜಾರಿ ಹಾಗೂ ತಂಡವರು, ಸಮೂಹ ನೃತ್ಯವನ್ನು ಕು. ದೀಕ್ಷಾ ಭೀಸೆ ಹಾಗೂ ಸಂಗಡಿಗರು, ಗೊಂಬೆ ಕುಣಿತ ಕು. ಪ್ರವೀಣ ಕಸ್ತೂರಿ ಗೋಳ ಹಾಗೂ ಸಂಗಡಿಗರು, ಸಾರವಾಡ ಕರಡಿ ಮಜಲು ಶ್ರೀ ಸಿದ್ದಪ್ಪ ಗಿರಿಮಲ್ಲಪ್ಪ ಹೂಗಾರ ಹಾಗೂ ಸಂಗಡಿಗರು ಮತ್ತು ಕು. ನಿಜಬಾಯಿ ಹೋಸಾಳಿ ಮತ್ತು ಸಂಗಡಿಗರಿಂದ ಅರ್ಥಪೂರ್ಣ ಶಿಕ್ಷಣವೇ ಸಂಪತ್ತು ನಾಟಕ ಪ್ರದರ್ಶನವು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು. ಕು. ದೀಕ್ಷಾ ಭೀಸೆ ಮತ್ತು ತಂಡದವರ ಮಹೀಷಾಸುರ ಮರ್ಧಿನಿ, ಪುಣ್ಯಕೋಟಿ, ಶ್ರೀ ರೇಣುಕಾ ಯಲ್ಲಮ್ಮದೇವಿಯ ಕುರಿತ ಸಮೂಹ ನೃತ್ಯವ ಕಾರ್ಯಕ್ರಮದ ವೈಭವ ಹೆಚ್ಚಿಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಸಂತೋಷ ಭೋವಿ ಇವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಈ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಕಾಶ ಸಿದ್ಧಾಪುರ, ಪ್ರೊ. ಪಿ.ಎಸ್.ತೋಳನೂರ, ಡಿ.ಪಿ.ಬೆಳ್ಳಗ್ಗಿ, ಶ್ರೀಮತಿ ಶಿಲ್ಪಾ ಪಾಟೀಲ ಸೇರಿದಂತೆ ಕಲಾವಿದರು ಕಲಾಸಕ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

