ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಶೇಷವಾಗಿ ಹೆಣ್ಣು ಮಕ್ಕಳು ಅತೀ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಅದು ನಾಗರ ಪಂಚಮಿ ಹಬ್ಬ. ಈ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ದೊಡ್ಡ ಹಬ್ಬವೆಂದೇ ಹೇಳಬಹುದು.
ಶ್ರಾವಣ ಮಾಸದ ಮೊದಲನೆ ಹಬ್ಬವಾದ ನಾಗರ ಪಂಚಮಿಯನ್ನು ಚಡಚಣ ತಾಲ್ಲೂಕಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಬೆಳ್ಳಂಬೆಳಗ್ಗೆ ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕುವ ಮೂಲಕ ಶ್ರಾವಣ ಮಾಸದ ಮೊದಲ ಹಬ್ಬವಾದ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು.
ಚಡಚಣ ಪಟ್ಟಣದ ಬಸವೇಶ್ವರ ನಗರದ ಮುತ್ತೈದೆಯರು ಮಕ್ಕಳೊಂದಿಗೆ ಸೇರಿ ಹೊಸ ಬಟ್ಟೆ ತೊಟ್ಟು, ಕಲ್ಲು ನಾಗರ ಕಟ್ಟೆಗಳಿಗೆ ತೆರಳಿ ಕುಟುಂಬದ ಎಲ್ಲರಿಗೂ ಒಳ್ಳೆಯದಾಗಲೆಂದು ಬೇಡಿಕೊಳ್ಳುತ್ತಾ ದೇವರಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.
ಗೃಹಿಣಿಯರು ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕಪಕ್ಕದ ಮನೆಗಳಿಗೆ ಹಾಗೂ ಬಂಧು ಮಿತ್ರರ ಮನೆಗಳಿಗೆ ತೆರಳಿ ತಾವು ತಯಾರಿಸಿದ ಎಲ್ಲ ವಿಧದ ಖಾದ್ಯಗಳನ್ನ ಒಳಗೊಂಡ ಬುತ್ತಿಯನ್ನು ಹಂಚಿ ಬಂದರು.
ಹೀಗೆ ಒಬ್ಬರಿಗೊಬ್ಬರು ಮನೆಗಳಿಗೆ ತೆರಳಿ ಪೂಜೆ ಹಾಗೂ ಹಬ್ಬದ ವಿಶೇಷ ಭೋಜನದ ಬಳಿಕ ಮನೆಯ ಹತ್ತಿರದ ಮರಗಳಿಗೆ ಜೋಕಾಲಿ ಕಟ್ಟಿ ಎಲ್ಲರೂ ಜೋಕಾಲಿ ಜೀಕಿಕೊಂಡು ಸಂಭ್ರಮಿಸಿದರು.

