ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಾಡಿನಲ್ಲಿ ಶ್ರಾವಣ ಮಾಸದ ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ, ರುದ್ರಾಭಿಷೇಕ,ದೇವರಿಗೆ ಭಕ್ತರು ಹರಕೆ ಸಲ್ಲಿಸುವುದು, ಪುರಾಣ-ಪ್ರವಚನ ಆರಂಭ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರಾವಣ ಮಾಸದ ಮೊದಲ ದಿನವಾದ ಸೋಮವಾರ ಆರಂಭವಾದವು.
ಎಲ್ಲ ಮಾಸಗಳಲ್ಲಿ ಶ್ರಾವಣ ಮಾಸ ಹಿಂದುಗಳಿಗೆ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಜನರು ಉಪವಾಸ ವ್ರತ ಮಾಡುವದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಹಜ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಆರಂಭವಾಗುತ್ತವೆ. ಈ ಮಾಸದಲ್ಲಿ ನಾಗರಪಂಚಮಿ ಮೊದಲ ಬರುವ ಹಬ್ಬವಾಗಿದೆ. ನಂತರ ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಟಮಿ, ನೂಲ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬ, ರಾಘವೇಂದ್ರ ಸ್ವಾಮೀಜಿಗಳ ಆರಾಧನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿನ ಪ್ರತಿ ಶುಕ್ರವಾರ ಸುಮಂಗಲೆಯರು ಲಕ್ಷ್ಮೀ ಪೂಜೆ ಮಾಡುವುದು ವಿಶೇಷ.
ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರಿಗೂ ಸಹ ಪ್ರತಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆ ವಿಶೇಷ ರುದ್ರಾಭಿಷೇಕ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ವರ್ಷದ ಶ್ರಾವಣ ಮಾಸದ ರುದ್ರಾಭಿಷೇಕ ಆರಂಭವಾಗಿದೆ. ಈ ಪೂಜೆಯಲ್ಲಿ ಸಾಕಷ್ಟು ಭಕ್ತರು ರುದ್ರಾಭಿಷೇಕ ಮಾಡಿಸುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ. ಶ್ರಾವಣ ಮಾಸದಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ನಾಡಿನ ನಾನಾ ಭಾಗದಿಂದ ಸಾಕಷ್ಟು ಭಕ್ತರು ಬಂದು ದರ್ಶನ ಪಡೆದುಕೊಳ್ಳುತ್ತಾರೆ.
ಆ.11 ರಿಂದ 15 ರವರೆಗೆ ಐದು ದಿನಗಳ ಕಾಲ ನಡೆಯುವ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ದಿನಗಳಲ್ಲಿಯಂತೂ ಬಸವ ಭಕ್ತರ ದಂಡೇ ಬಸವನಾಡಿಗೆ ಹರಿದು ಬರುತ್ತದೆ. ಶ್ರಾವಣ ಮಾಸವು ನಾಡಿಗೆ ಸುಭೀಕ್ಷೆಯನ್ನು ನೀಡುವಂತಾಗಲಿ ಎಂದು ಎಲ್ಲ ಭಕ್ತರ ಆಶಯವಾಗಿದೆ.

